ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಟ್ಟಿ ಪ್ರಕಟವಾಗಿದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿವೆ. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ. ಹಾಗಂತ ತೀರಾ ನಿರಾಸೆ ಪಟ್ಟುವಂಥದ್ದು ಇಲ್ಲ. ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ, ಭಾರತದಲ್ಲೇ ನಿರ್ಮಾಣವಾದ, ವಿದೇಶಿ ಸಂಸ್ಥೆ ತಯಾರಿಸಿದ ಡಾಕ್ಯುಮೆಂಟರಿ ನಾಮ ನಿರ್ದೇಶನ ಪಟ್ಟಿಯಲ್ಲಿದೆ
ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.
ನಿರ್ದೇಶನದ ವಿಭಾಗದಲ್ಲಿ ಕ್ರಿಸ್ಟೊಫರ್ ನೋಲನ್, ಜಸ್ಟಿನ್ ಟ್ರೈಟ್, ಜೊನಥನ್ ಗ್ಲೆಜರ್, ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಕ್ಯಾರಿ ಮುಲ್ಲಿಗನ್, ಆನೆಟ್ ಬೆನಿಂಗ್, ಎಮ್ಮ ಸ್ಟೊನ್, ಸಾಂಡ್ರಾ ಹುಲ್ಲರ್ ಮೊದಲಾದವರು ಇದ್ದಾರೆ.