ಬೆಂಗಳೂರು:- ಸಾಮಾಜಿಕ ಜಾಲತಾಣಗಳ ನೆರವಿನಿಂದ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕನನ್ನು ಹೈದರಾಬಾದ್ನಲ್ಲಿ ಪತ್ತೆಹಚ್ಚಲಾಗಿದೆ.
ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಾಪತ್ತೆಯಾದ ಪ್ರಣವ್ ಎಂಬ 12 ವರ್ಷದ ಬಾಲಕನನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಹೈದರಾಬಾದ್ನಲ್ಲಿ ಪತ್ತೆಹಚ್ಚಲಾಗಿದೆ. ಡೀನ್ಸ್ ಅಕಾಡೆಮಿಯಲ್ಲಿ ಆರನೇ ತರಗತಿ ಓದುತ್ತಿರುವ ಪ್ರಣವ್, ಮೂರು ದಿನಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್ನಿಂದ ಬಸ್ ಹತ್ತಿ ಹೊರಟಿದ್ದ. ಮೂರು ದಿನಗಳಿಂದ ಆತ ಬೇರೆ ಬೇರೆ ನಗರಗಳಲ್ಲಿ ಸುತ್ತಾಡಿದ್ದ. ಸಿಸಿಟಿವಿ ಪರಿಶೀಲನೆ, ಲೊಕೇಷನ್ ಟ್ರ್ಯಾಕ್ ಮಾಡಿದ್ದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಅದರೆ, ಈತನ ಪತ್ತೆಗೆ ಸೋಷಿಯಲ್ ಮೀಡಿಯಾ ನೆರವಾಗಿವೆ.
ವೈಟ್ಫೀಲ್ಡ್ನಲ್ಲಿರುವ ಕೋಚಿಂಗ್ ಸೆಂಟರ್ನಿಂದ ಮೆಜೆಸ್ಟಿಕ್ಗೆ ಬಂದ ಬಾಲಕ ಬಸ್ ಹತ್ತಿ ಹೊರಟಿದ್ದ. ಇದನ್ನು ತಿಳಿದುಕೊಂಡ ಕೆಲವು ಸ್ವಯಂ ಸೇವಕರು ಆತನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈತನ ಗುರುತು ಸಿಕ್ಕರೆ ಮಾಹಿತಿ ನೀಡಿ ಎಂದು ತಿಳಿಸಿದ್ದರು. ಈತನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬೆಂಗಳೂರಿನಿಂದ ಹೈದರಾಬಾದ್ಗೆ ತೆರಳಿದ್ದ ವ್ಯಕ್ತಿಯೊಬ್ಬರು ಹೈದರಾಬಾದ್ನ ಮೆಟ್ರೋದಲ್ಲಿ ಬಾಲಕನನ್ನು ಗುರುತಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈತನ ಫೋಟೊ ನೋಡಿದ ವ್ಯಕ್ತಿಯು ಹೈದರಾಬಾದ್ನಲ್ಲಿ ಬಾಲಕನನ್ನು ಗುರುತಿಸಿದ್ದರು. ಬಾಲಕನ ತಂದೆ ಸುಕೇಶ್ ಅವರು ಕೂಡಲೇ ಹೈದರಾಬಾದ್ಗೆ ಹೋಗಿ ಮಗನನ್ನು ಭೇಟಿಯಾಗಿದ್ದಾರೆ. ಅಲ್ಲಿ ಮಗ ಸುರಕ್ಷಿತವಾಗಿರುವುದನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ.