ದೀಕ್ಷಿತ್ ಶೆಟ್ಟಿ ಹಾಗೂ ಚೈತ್ರ ಆಚಾರ್ ಮುಖ್ಯಭೂಮಿಯಲ್ಲಿ ನಟಿಸಿರುವ ‘ಬ್ಲಿಂಕ್’ ಚಿತ್ರತಂಡ, ಚಿತ್ರೀಕರಣದ ದಿನದಿಂದಲೂ ತಮ್ಮ ವಿನೂತನ ಪ್ರಚಾರ ತಂತ್ರಗಳಿಂದ ಚಂದನವನದಲ್ಲಿ ಗಮನ ಸೆಳೆದಿದೆ. ತಮ್ಮ ಚಿತ್ರವನ್ನು ಜನರಿಗೆ ಮುಟ್ಟಿಸುವಲ್ಲಿ ಗೆಲ್ಲಲೇಬೇಕು ಎಂದು ಶಪಥ ಮಾಡಿರುವ ಈ ತಂಡ ಯಾವುದೇ ಮುಚ್ಚು ಮರೆ ಇಲ್ಲದೆ , ನೂತನ ಚಿತ್ರಗಳನ್ನು ಕಟ್ಟುವಲ್ಲಿ , ಜನರಿಗೆ ತಲುಪಿಸುವಲ್ಲಿ ಇರುವ ಸಮಸ್ಯೆಗಳನ್ನು ತಿಳಿಸಲು ವಿನೂತನ ಪ್ರಯೋಗ ಮಾಡಿದ್ದು ‘ಜನರಿಂದಲೇ ಸಿನಿಮಾ, ಜನರೇ ಸಿನಿಮಾ’ ಎಂಬಾ ವಿಶಿಷ್ಟ ಸಾಲುಗಳು ಜನರ ಮನಸ್ಸನ್ನು ಗೆಲ್ಲುತ್ತಿವೆ. ಚಿತ್ರಮಂದಿರದಿಂದ ದೂರ ಉಳಿದಿರುವ ಜನರಿಗೆ, ಮತ್ತೆ ಚಿತ್ರಮಂದಿರದ ಆ ಮಾಂತ್ರಿಕ ಜಗತ್ತಿನ ವಿಶೇಷತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಈಗಾಗಲೇ ತಮ್ಮ ಹೊಸತನದಿಂದ ಜನರ ಗಮನಸೆಳೆದಿರುವ ಬ್ಲಿಂಕ್ ತಂಡವು ಮಾರ್ಚ್ ನಲ್ಲಿ ಚಿತ್ರಮಂದಿರದೊಳಗೆ ಪ್ರವೇಶಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಜನನಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರವು ಸೈಫೈ ಪ್ರಕಾರದ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳಿದಿಟ್ಟುಕೊಳ್ಳುವುದು ಖಂಡಿತವೆಂದು ನಿರ್ಮಾಪಕ ರವಿಚಂದ್ರ ಎ ಜೆ ಹೇಳುತ್ತಾರೆ .