ನವದೆಹಲಿ: 75ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೋಂದಿಗೆ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ 21 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸೂಚಿಸಲಾಯಿತು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಇದಾದ ಬಳಿಕ ಬೆಳಗ್ಗೆ 10.30ರಿಂದ ವಿಜಯ್ ಚೌಕ್ನಿಂದ ಕರ್ತವ್ಯ ಪಥದವರೆಗೆ ಪರೇಡ್ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಕೂಡ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಪರೇಡ್ ಮೈದಾನಕ್ಕೆ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಪರೇಡ್ ಆರಂಭವಾಗಲಿದೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರೇಡ್ ವೀಕ್ಷಣೆಗೆ 77 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಪರೇಡ್ ವೀಕ್ಷಿಸುವ 70 ಸಾವಿರಕ್ಕೂ ಹೆಚ್ಚು ಜನರಲ್ಲಿ 13, ಸಾವಿರ ಅತಿಥಿಗಳೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ವೈಮಾನಿಕ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಹವಾಮಾನ ಅಡೆತಡೆಯಾಗಬಾರದು ಎಂಬ ಕಾರಣಕ್ಕೆ 10:30ರ ವೇಳೆಗೆ ಪರೇಡ್ ಹಮ್ಮಿಕೊಳ್ಳಲಾಗಿದೆ. ಶಿಸ್ತು, ಸಮಯ, ಪರಿಪಾಲನೆಯೊಂದಿಗೆ ನಡೆಯುವ ಈ ಪರೇಡ್ ಸರಿಸುಮಾರು 90 ನಿಮಿಷಗಳ ವರೆಗೆ ನಡೆಯಲಿದೆ.
ನಾರಿ ಶಕ್ತಿಯೇ ವಿಶೇಷ:
ಈ ಬಾರಿ ವಿಶೇಷವಾಗಿ ಕಂಡುಬರುತ್ತಿರುವುದು ʻನಾರಿ ಶಕ್ತಿ ಪ್ರದರ್ಶನʼ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್ ನಡೆಸಿಕೊಡಲಿದ್ದಾರೆ. ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನು ಮುನ್ನಡೆಸಲಿದ್ದಾರೆ.
ಜೊತೆಗೆ 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುವ ಮೆರೆವಣಿಗೆಯನ್ನು ನಡೆಸಿಕೊಡಲಿದ್ದಾರೆ. ಸಂಖ್, ನಾದಸ್ವರ, ನಗದ ಇತ್ಯಾದಿ ಸಂಗೀತದೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಇದರೊಂದಿಗೆ ಭಾರತೀಯ ವಾಯುಪಡೆಯು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್ನಲ್ಲಿ ಗಮನ ಸೆಳೆಯಲಿವೆ.