ಬೆಂಗಳೂರು:- ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್ಗೆ ಭೇಟಿ ನೀಡಿದ್ದಾರೆ.
ನಿನ್ನೆ ಒಂದೇ ದಿನ 96,500 ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯವಾಗಿದೆ. ಈ ಬಾರಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ನಾಳೆ ಕೊನೆಯ ದಿನವಾಗಿದೆ.
ಈ ಬಾರಿಯ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ್ದ ಅವರು, ಬಸವಣ್ಣನವರನ್ನು ಇನ್ಮುಂದೆ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ ಅಂತ ಹೇಳಿದ್ದರು.
ವಿದೇಶಿ ಹೂಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಫ್ಲವರ್ ಶೋನಲ್ಲಿ ಇಪೇಶನ್ಸ್, ಪೆಟುನೀಯಾ, ಜೆರೇನಿಯಮ್, ಜೇರ್ಬೇರ, ಸೇವಂತಿಗೆ, ಕೆಲಾಂಚೋ, ಸಾಲ್ವಿಯಾ ಸೇರಿದಂತೆ ಇಂಡೋ ಅಮೇರಿಕನ್ ಹೈಬ್ರಿಡ್ ಹೂವುಗಳು ನೋಡುಗರ ಕಣ್ಮನ ಸೆಳೆದಿವೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 68 ಬಗೆಯ ಹೂಗಳನ್ನ ಬಳಸಲಾಗಿದೆ. ಗುಲಾಬಿ, ಸಂಪಿಗೆ, ಪ್ಯಾಲನೋಪ್ಸ್, ಲ್ಯಾಡ್ಸ್ ಹೂ ಎಲ್ಲರ ಗಮನ ಸೆಳೆಯುತ್ತಿವೆ. ವಚನಕಾರರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಇಷ್ಟಲಿಂಗವನ್ನ ನಿರ್ಮಾಣ ಮಾಡಲಾಗಿದೆ. ಅನುಭವ ಮಂಟಪವನ್ನ 3 ಬಗೆಯ ಗುಲಾಬಿ ಹಾಗೂ 4 ಬಗೆಯ ಸಂಪಿಗೆ ಹೂ ಬಳಸಿ ನಿರ್ಮಿಸಲಾಗಿದೆ.
ಮತ್ತೊಂದೆಡೆ ಫ್ಲವರ್ ಶೋನಲ್ಲಿ, ಇಕೆಬಾನ, ತರಕಾರಿ ಕೆತ್ತನೆ, ಥಾಯ್ ಆರ್ಟ್, ಜಾನೂರು ಮತ್ತು ಪುಷ್ಪ ರಂಗೋಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನ ಚಿತ್ರನಟಿ ತಾರಾ ಉದ್ಘಾಟನೆ ಮಾಡಿದ್ದರು. ಬಳಿಕ ಫ್ಲವರ್ ಶೋ ವೀಕ್ಷಿಸಿದ್ದರು.
ಈ ಬಾರಿಯೂ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಕ್ಕಳು, ಕಪಲ್ಸ್, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ.
ನಾಳೆ ಒಂದು ದಿನ ಮಾತ್ರ ಫ್ಲವರ್ ಶೋ ಇರಲಿದೆ. ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 7.30 ರವರೆಗೆ ಫ್ಲವರ್ ಶೋ ನೋಡಬಹುದು.