ಹೈದರಾಬಾದ್: ತೆಲಂಗಾಣ (Telangana) ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (HMDA) ಮಾಜಿ ನಿರ್ದೇಶಕ ಶಿವ ಬಾಲಕೃಷ್ಣ ಅವರ ಒಟ್ಟು 100 ರೂ. ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಪತ್ತೆ ಮಾಡಿದೆ . ಎಸಿಬಿಯ ಪ್ರಾಥಮಿಕ ವರದಿಗಳ ಪ್ರಕಾರ, ಬಾಲಕೃಷ್ಣ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಮತಿ ನೀಡುವ ಮೂಲಕ ಕೋಟಿಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ.
ಬಾಲಕೃಷ್ಣ ಅವರು ತಮ್ಮ ಆದಾಯದ ಮೂಲಗಳನ್ನು ಮೀರಿ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು ಮತ್ತು ಕಚೇರಿಗಳು ಸೇರಿದಂತೆ ರಾಜ್ಯದಾದ್ಯಂತ ಹಲವಾರು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು. ಮುಂಜಾನೆ 5 ಗಂಟೆಗೆ ಬಾಲಕೃಷ್ಣ ಅವರಿಗೆ ಸೇರಿದ ಸುಮಾರು 20 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ.
ಎಸಿಬಿ ತಂಡಗಳು ಎಚ್ಎಂಡಿಎ ಮತ್ತು RERA ಕಚೇರಿಗಳ ಮೂಲಕ ದಾಳಿ ನಡೆಸಿದೆ. ತಮ್ಮ ಅಧಿಕೃತ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಸಂಪತ್ತು ಗಳಿಸಿರುವ ಶಂಕೆ ವ್ಯಕ್ತಪಡಿಸಿರುವ ಬಾಲಕೃಷ್ಣ ವಿರುದ್ಧ ಲೆಕ್ಕಕ್ಕೆ ಬಾರದ ಆಸ್ತಿ ಪ್ರಕರಣ ದಾಖಲಾಗಿದೆ. ಚಿನ್ನ, ಫ್ಲಾಟ್, ಬ್ಯಾಂಕ್ ಠೇವಣಿ, ಬೇನಾಮಿ ಆಸ್ತಿ ಸೇರಿದಂತೆ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ವಶಪಡಿಸಿಕೊಂಡ ವಸ್ತುಗಳ ಪೈಕಿ 40 ಲಕ್ಷ ನಗದು, 2 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳು, 60 ಅತ್ಯಾಧುನಿಕ ಕೈಗಡಿಯಾರಗಳು, ಆಸ್ತಿ ದಾಖಲೆಗಳು ಮತ್ತು ಗಣನೀಯ ಬ್ಯಾಂಕ್ ಠೇವಣಿಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ 14 ಫೋನ್ಗಳು, 10 ಲ್ಯಾಪ್ಟಾಪ್ಗಳು ಮತ್ತು ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಜಪ್ತಿ ಮಾಡಲಾಗಿದೆ.