ಬಿಗ್ಬಾಸ್ ಕನ್ನಡ 10ನೇ ಸೀಸನ್ನಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಆತ್ಮವಿಶ್ವಾಸದಿಂದಲೇ ಇದ್ದ ಕಾರ್ತಿಕ್ ಅವರು ಕೊನೆಯ ಕ್ಷಣದಲ್ಲಿ ಟೆನ್ಷನ್ಗೆ ಒಳಗಾದಂತೆ ಕಾಣಿಸುತ್ತಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
ಬಿಗ್ಬಾಸ್ ಜರ್ನಿಯುದ್ದಕ್ಕೂ ಕಾರ್ತಿಕ್ ಮಹೇಶ್ ಅವರಲ್ಲಿ ಎದ್ದು ಕಾಣಿಸಿದ್ದು ನಾಯಕತ್ವದ ಗುಣ ಅವರು ಈ ಸೀಸನ್ನಲ್ಲಿ ಎರಡು ಬಾರಿ ಮನೆಯ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿದ್ದಾಗಲಷ್ಟೇ ಅಲ್ಲ, ಗೇಮ್ ಆಡುವಾಗ, ಮನೆಯ ಉಳಿದ ಚಟುವಟಿಕೆಗಳಲ್ಲಿ ಎಲ್ಲವೂ ಅವರಲ್ಲಿನ ಮುಂದಾಳು ಎದ್ದು ಕಾಣಿಸುತ್ತಿದ್ದ. ಹಾಗೆಂದು ಅವರೇನೂ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಮಾತನ್ನೂ ಕೇಳಿಸಿಕೊಂಡು ಎಲ್ಲರನ್ನೂ ಖುಷಿಖುಷಿಯಾಗಿಟ್ಟ ಕ್ಯಾಪ್ಟನ್ ಅವರು.
ನಾಲ್ಕನೇ ವಾರದಲ್ಲಿ ‘ಉಗ್ರಂ’ ತಂಡದ ಮುಂದಾಳಾಗಿ ತನಿಷಾ ನೇತೃತ್ವದ ‘ಭಜರಂಗಿ’ ತಂಡವನ್ನು ಹಿಂದಿಕ್ಕಿ ಗೆಲುವಿನ ದಡ ಮುಟ್ಟಿಸಿದ್ದು ಇದೇ ಕಾರ್ತಿಕ್. ಏಳನೇ ವಾರದಲ್ಲಿ ಪ್ರತಾಪ್, ನಮೃತಾ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರಿಂದ ಸಾಕಷ್ಟು ಸ್ಪರ್ಧೆಯನ್ನು ಎದುರಿಸಿಯೂ ಅವರು ನಾಯಕನ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಎಂಟನೇ ವಾರವೂ ಅವರು ನಾಯಕನಾಗಿ ಆಯ್ಕೆಯಾಗುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಮನೆಯೊಳಗಿನ ಕೆಲಸಗಳು, ಟಾಸ್ಕ್ಗಳನ್ನು ಹೊರತುಪಡಿಸಿ ಜಿಯೊ ಸಿನಿಮಾ ಫನ್ಫ್ರೈಡೆ ಟಾಸ್ಕ್ಗಳಲ್ಲಿಯೂ ಕಾರ್ತಿಕ್ ಅವರ ಕಾಂಪಿಟೇಷನ್ ಗಮನಾರ್ಹವಾದದ್ದು. ‘ಚಂಡ ಮಾರುತ’ ಟಾಸ್ಕ್ನಲ್ಲಿ ಸಂಗೀತಾ ಜೊತೆಗೂಡಿ ಅವರು ಆಡಿದ ಆಟಕ್ಕೆ ಗೆಲುವಿನ ಪ್ರತಿಫಲ ದೊರೆತಿತ್ತು. ‘ಬ್ರೇಕ್ ದ ಬಲೂನ್’ ಟಾಸ್ಕ್ನಲ್ಲಿಯೂ ಈ ಜೋಡಿ ಮೋಡಿ ಮಾಡಿ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರ ವಿರುದ್ಧ ಎರಡನೇ ಹಂತದಲ್ಲಿ ಗೆಲುವು ಸಾಧಿಸಿತ್ತು.