ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣ ಖಂಡಿಸಿ ಇಂದು (ಸೋಮವಾರ) ರಾಜ್ಯಾದ್ಯಂತ ಬಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲೂ (Mysuru Bank Circle) ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಭಾರೀ ಹೈಡ್ರಾಮಾ ಕಂಡುಬಂದಿತು.
ಬ್ಯಾರಿಕೇಡ್ ಮತ್ತು ಪೊಲೀಸ್ ದಿಗ್ಬಂಧನದ ನಡುವೆ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟವೂ ನಡೆದಿದ್ದು, ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಶೋಕ್ ಆಗಮಿಸುವ ಮೊದಲೇ ಪ್ರತಿಭಟನೆ ಮುಗಿದುಹೋಗಿದೆ. ಅಶೋಕ್ ಆಗಮನದ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಸಂಗವೂ ನಡೆದಿದೆ.