ನವದೆಹಲಿ:- ಪೆನ್ಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ.
ಸರ್ಕಾರೀ ಕೆಲಸದಲ್ಲಿರುವ ಮಹಿಳೆ ಅಕಾಲಿಕವಾಗಿ ಮರಣವನ್ನಪ್ಪಿದರೆ ಆಕೆಯ ಪಿಂಚಣಿ ಪಡೆಯಲು ಪತಿ ಅರ್ಹನಾಗಿರುತ್ತಿದ್ದರು. ಆದರೆ ಇನ್ನು ಮುಂದೆ ಆಕೆ ತನ್ನ ನಂತರ ಪಿಂಚಣಿ ಪಡೆಯಲು ಇಚ್ಛಾನುಸಾರ ಮಕ್ಕಳು ಅಥವಾ ಇತರೆ ಕುಟುಂಬ ಸದಸ್ಯರ ಹೆಸರನ್ನು ನಾಮಿನಿಯಾಗಿ ನೀಡಬಹುದಾಗಿದೆ.
ಇದಕ್ಕೆ ಮೊದಲು ಮಹಿಳೆಯ ಪತಿ ಕೂಡಾ ಮರಣವನ್ನಪ್ಪಿದ್ದರೆ ಮಾತ್ರ ಮಕ್ಕಳು ಅಥವಾ ಕುಟುಂಬ ಸದಸ್ಯರು ಆಕೆಯ ಪಿಂಚಣಿಗೆ ಅರ್ಹರಾಗಿರುತ್ತಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಹೊಸ ಬದಲಾವಣೆಗೆ ಕಾರಣವೇನು?
ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆ ತನ್ನ ಪತಿಗೆ ಪಿಂಚಣಿ ಹಣ ನೀಡಲು ಇಷ್ಟಪಡದೇ ಇದ್ದಲ್ಲಿ ತನ್ನ ಮಕ್ಕಳಿಗೆ ವರ್ಗಾಯಿಸಲು ಅನುಕೂಲವಾಗುವಂತೆ ಈ ಹೊಸ ನಿಯಮ ರೂಪಿಸಲಾಗಿದೆ
ಅರ್ಜಿ ಸಲ್ಲಿಸುವುದು ಹೇಗೆ? ಪಿಂಚಣಿ ಪಡೆಯಲು ಯಾರು ಅರ್ಹರು?
ಮಹಿಳೆ ತಾನು ನೌಕರಿ ಮಾಡುವ ಮುಖ್ಯ ಕಚೇರಿಗೆ ಪತ್ರ ಬರೆದು ತಾನು ಯಾರಿಗೆ ತನ್ನ ನಂತರ ಪಿಂಚಣಿ ಕೊಡಲು ಬಯಸುತ್ತೇನೆಂದು ಲಿಖಿತವಾಗಿ ದಾಖಲೆ ನೀಡಬೇಕಾಗುತ್ತದೆ. ಒಂದು ವೇಳೆ ಮಹಿಳೆಗೆ ಮಕ್ಕಳಿಲ್ಲದೇ ಪತಿ ಮಾತ್ರವಿದ್ದ ಸಂದರ್ಭದಲ್ಲಿ ಆ ಪೆನ್ಷನ್ ಹಣ ಪತಿಗೇ ಸಂದಾಯವಾಗಲಿದೆ. ಮಾನಸಿಕವಾಗಿ ಅನಾರೋಗ್ಯ ಪೀಡಿತ ಅಥವಾ ಅಪ್ರಾಪ್ತ ಮಕ್ಕಳಿದ್ದರೂ ಗಾರ್ಡಿಯನ್ ಎಂಬ ಕಾರಣಕ್ಕೆ ಪತಿಗೇ ಪಿಂಚಣಿ ಹಣ ಸಿಗಲಿದೆ. ಆದರೆ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಆ ಹಣ ಮಕ್ಕಳಿಗೆ ಸೇರಲಿದೆ. ಒಂದು ವೇಳೆ ಮಕ್ಕಳೂ ಪ್ರಾಪ್ತ ವಯಸ್ಸಿಗೆ ಬಂದು, ಪತಿಯೂ ಇದ್ದರೆ ಆ ಪೆನ್ಷನ್ ಹಣ ಮಕ್ಕಳಿಗೇ ಸಂದಾಯವಾಗಲಿದೆ.