ಬೆಂಗಳೂರು:- ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿ ಕೊನೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.
ಚಂದನ್ ಬಂಧಿತನಾಗಿದ್ದು, ಆರ್ಪಿಸಿ ಲೇಔಟ್ ಹೋಟೆಲ್ಗೆ ತನ್ನ ಸ್ನೇಹಿತರ ಜತೆ ಬಂದಾಗ ಆತ ಈ ಕೃತ್ಯ ಎಸಗಿದ್ದ.ಈ ಬಗ್ಗೆ ಹೋಟೆಲ್ ವ್ಯವಸ್ಥಾಪಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ವಿಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಸ್ನೇಹಿತನ ಮಾತು ಕೇಳಿ ಕೆಟ್ಟ:
ಗ್ಯಾಸ್ ಡೆಲಿವರಿ ಬಾಯ್ ಆಗಿದ್ದ ಚಂದನ್, ಡಿ.30 ರಂದು ರಾತ್ರಿ 7.30ರಲ್ಲಿ ತನ್ನ ಸ್ನೇಹಿತರ ಜತೆಗೆ ಆರ್ಪಿಸಿ ಲೇಔಟ್ನಲ್ಲಿರುವ ಹೋಟೆಲ್ಗೆ ತಿಂಡಿ ತಿನ್ನಲು ಬಂದಿದ್ದ. ಆ ವೇಳೆ ಹೋಟೆಲ್ ಕ್ಯಾಶ್ ಕೌಂಟರ್ನಲ್ಲಿ ನಿಂತಿದ್ದ ಯುವತಿಗೆ ಈ ಸ್ನೇಹಿತರ ಕಣ್ಣಿಗೆ ಬಿದ್ದಿದ್ದಳು. ಆ ಯುವತಿ ಮೈ ಮುಟ್ಟು ನೋಡೋಣ ಎಂದು ಚಂದನ್ಗೆ ಆತನ ಸ್ನೇಹಿತರು ಸವಾಲು ಹಾಕಿದ್ದರು.
ಈ ಸವಾಲು ಸ್ವೀಕರಿಸಿದ ಚಂದನ್, ಕ್ಯಾಶ್ ಕೌಂಟರ್ನಲ್ಲಿ ನಿಂತಿದ್ದ ಯುವತಿಯನ್ನು ಹಿಂದಿನಿಂದ ಹೋಗಿ ಮುಟ್ಟಿದ್ದ. ಈ ಅಸಭ್ಯ ವರ್ತನೆಗೆ ಸಂತ್ರಸ್ತೆ ಕಿಡಿಕಾರಿದ್ದಳು. ತಕ್ಷಣವೇ ಹೋಟೆಲ್ನಿಂದ ಸ್ನೇಹಿತರ ಜತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.