ಬೆಂಗಳೂರು: ರಾಜ್ಯದಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಸುಧಾರಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಲಾನಯನ ನಿರ್ವಹಣೆಯ ಉತ್ಕೃಷ್ಠ ಕೇಂದ್ರ, ಜಿಕೆವಿಕೆ ಆವರಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಇಂದು ನಡೆಸಲಾಯಿತು..
ರಾಜ್ಯದಲ್ಲಿ ಅಂತರ್ಜಲದ ಸಮರ್ಪಕ ಬಳಕೆಗಾಗಿ ಜಲ-ಸಮರ್ಥ ನೀರಾವರಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ರೈತರಿಗೆ ನೀರಿನ ಸದ್ಬಳಕೆ ಕುರಿತು ಶಿಕ್ಷಣ, ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒಗ್ಗೂಡಿಸುವ ಕಾರ್ಯತಂತ್ರ ಹಾಗೂ ಅಂತರ್ಜಲ ನಿರ್ವಹಣೆ ಕುರಿತು ನೀತಿ ನಿಯಮಾವಳಿಗಳ ಬಗ್ಗೆ (ನೀರಿನ ಕ್ರೆಡಿಟ್ ಪದ್ಧತಿ) ಚರ್ಚಿಸಿ ಸಮಗ್ರ ಕ್ರಿಯಾ ಯೋಜನೆಯ ಮಾನದಂಡಗಳನ್ನು ರೂಪಿಸಿ, ಸದರಿ ಕ್ರಿಯಾ ಯೋಜನೆಯನ್ನು ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಜಲಾನಯನ ನಿರ್ವಹಣೆಯ ಉತ್ಕೃಷ್ಠ ಕೇಂದ್ರ, ಶೀಘ್ರದಲ್ಲಿಯೇ ಸಿದ್ದಪಡಿಸಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು…
ಸಮಗ್ರ ಕ್ರಿಯಾ ಯೋಜನೆಯಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಸೂಕ್ತ ಸ್ಥಳಗಳಲ್ಲಿ ನೀರು ಶೇಕರಣಾ ವಿನ್ಯಾಸಗಳಾದ ಚೆಕ್ ಡ್ಯಾಮ್, ಇಂಗು ಗುಂಡಿ ನಿರ್ಮಾಣ, ಚಾಲ್ತಿಯಲ್ಲಿರುವ ಕೃತಕ ಮರು ಪೂರಣ ವಿನ್ಯಾಸಗಳ ನಿರ್ವಹಣೆ, ಹೊಸ ವಿನ್ಯಾಸಗಳಾದ ಶಾಪ್ಟ್ಗಳು ಹಾಗೂ ಇತರೆ ವಿನ್ಯಾಸಗಳ ನಿರ್ಮಾಣ, ನೀರಿನ ಸದ್ಭಳಕೆಗಾಗಿ ಸಮರ್ಥ ನೀರಾವರಿ ಪದ್ಧತಿಗಳಾದ ಹನಿ ಮತ್ತು ತುಂತುರು ನೀರಾವರಿ, ಸೂಕ್ತ ಬೆಳೆಗಳ ಆಯ್ಕೆ ಮತ್ತು ಬೆಳೆ ಹೊದಿಕೆ ಅಳವಡಿಸುವ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
ಅವಶ್ಯಕತೆಗೆ ಅನುಗುಣವಾಗುವ ಮಳೆ ನೀರು ಮತ್ತು ಅಂತರ್ಜಲವನ್ನು ಬಳಕೆ ಮಾಡುವುದು, ರೈತರಿಗೆ ಅಂತರ್ಜಲದ ಸಮರ್ಪಕ ಬಳಕೆಯ ಬಗ್ಗೆ ಅರಿವು ಮೂಡಿಸುವುದು, ರೈತರಲ್ಲಿ ಸಹಭಾಗಿತ್ವ ನೀರಿನ ನಿರ್ವಹಣೆ ಪದ್ಧತಿಯನ್ನು ಅಳವಡಿಸುವಂತೆ ಮಾಡಿ ಅವರಲ್ಲಿ ಒಡೆತನದ ಜವಾಬ್ದಾರಿ ತರುವುದು ಹಾಗು ಅಂತರ್ಜಲದ ಬಳಕೆಯ ಬಗ್ಗೆ ಹೊಸ ಕ್ರಿಯಾಯೋಜನೆಗಳನ್ನು ರೂಪಿಸುವ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು..
ಬಹುಮುಖ್ಯವಾಗಿ ಇಂಗಾಲದ ಕ್ರೆಡಿಟ್ ಮಾದರಿಯಂತೆ ನೀರಿನ ಕ್ರೆಡಿಟ್ ಪದ್ಧತಿಯನ್ನು ಚಾಲ್ತಿಗೆ ತರುವುದು. ನೀರಿನ ಕ್ರೆಡಿಟ್ ಪದ್ಧತಿ ಎಂದರೆ ಬೆಳೆಗಳಿಗೆ ನೀರಿನ ಕೊರತೆ ಇರುವಂತ ರೈತರು ಹೆಚ್ಚು ನೀರಿರುವ ರೈತರಿಂದ ಕ್ರೆಡಿಟ್ ಪಡೆಯುವ ಬಗ್ಗೆಯೂ ಸಮಗ್ರವಾಗಿ ಚರ್ಚಿಸಲಾಯಿತು…
ಸದರಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಶ್ರೀ ಗಿರೀಶ್, ತೋಟಗಾರಿಕೆ ಇಲಾಖೆಯ ನಿರ್ದೇಶಕರು ಶ್ರೀ ಡಿ.ಎಸ್ರಮೇಶ್, ಉಪ ಅರಣ್ಯ ಅಧಿಕಾರಿಗಳಾದ ಶ್ರೀ ರುದ್ರನ್, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಎ.ಬಿ.ಪಾಟೀಲ್, ಐ.ಐ.ಎಸ್.ಸಿ ಬೆಂಗಳೂರಿನ ಡಾ||ಶೇಖರ್ ಮುದ್ದು, ಎನ್.ಬಿ.ಎಸ್.ಎಸ್ – ಎಲ್.ಯು.ಪಿಯ ಡಾ|| ರಾಜೇಂದ್ರನ್, ರಿವಾರ್ಡ್ ಯೋಜನೆಯ ವಿಶ್ವಬ್ಯಾಂಕ್ ಸಲಹೆಗಾರರಾದ ಶ್ರೀ ನಟರಾಜನ್, ಹಾಗೂ ಜಲಾನಯನ ಅಭಿವೃದ್ಧಿ ಉತ್ಕೃಷ್ಟ ಕೇಂದ್ರದ ನಿರ್ದೇಶಕರಾದ ಡಾ|| ಪ್ರಕಾಶ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.