ಬೆಂಗಳೂರು: ಕಲ್ಲು ಹೊಡೆದುಕೊಂಡು ಇದ್ದವರನ್ನ ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪ್ರತ್ಯೇಕ ರಾಷ್ಟ್ರದ ಬಗ್ಗೆ ಡಿ.ಕೆ.ಸುರೇಶ್ ಹೇಳಿಕೆ ವಿಚಾರ ಕುರಿತು ಬಿಡದಿಯಲ್ಲಿ ಸುದ್ದಿಗಾರೊಂದಿಗೆ ಪ್ರತಿಕ್ರಿಯಿಸಿದ ಅವರು, ನಿನ್ನೆಯ ದಿನ ಡಿ.ಕೆ.ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ, ಕರ್ನಾಟಕಕ್ಕೆ ಅನ್ಯಾಯ ಎಂಬ ಕಾರಣ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೊ ನ್ಯಾಯ ಯಾತ್ರೆ ಮಾಡಿದರು. ಈಗ ವಿಭಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ ಎಂದು ಟಾಂಗ್ ಕೊಟ್ಟಿದ್ದಾರೆ
ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರ ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂಥವರನ್ನ ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದ್ರೆ ಕಟ್ತಾರಾ? ಅವರ ಸಾಮ್ರಾಜ್ಯ ಕಟ್ಟುಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಲೇವಡಿ ಮಾಡಿದ್ದಾರೆ.