ಹೊಸಪೇಟೆ :- ಹಂಪಿ ಉತ್ಸವದ ಇತಿಹಾಸ, ವಿಜಯನಗರ ಸಾಮ್ರಾಜ್ಯದ ಗತವೈಭವ ಹಾಗೂ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಗಾಯಿತ್ರಿ ಪೀಠದ ವೇದಿಕೆಯ ಮೇಲೆ ಮರುಕಳಿಸುವಂತೆ ಹಂಪಿ ಉತ್ಸವ-2024 ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉತ್ಸವಕ್ಕೆ ಚಾಲನೆ ದೊರೆತ ನಂತರ, ಶುಕ್ರವಾರ ಮುಖ್ಯವೇದಿಕೆಯಲ್ಲಿ, ಸಂಗೀತ ನಿರ್ದೇಶಕ ಸಾಧುಕೋಕಲ ತಂಡದಿಂದ ರಸಮಂಜರಿ ಪ್ರಸ್ತುತ ಪಡಿಸಿದರು. ಸಾಧುಕೋಕಿಲ ತಂಡದ ಸಂಗೀತ ಸಂಯೋಜಕ ಪವೀಣ್ ಡಿ ರಾವ್ ಸಂಯೋಜಿಸಿದ ಹಂಪಿ ಉತ್ಸವ ಗೀತೆ ಗಾಯನಕ್ಕೆ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು. ಪ್ರೇಕ್ಷಕರು ಕರತಾಡನದಿಂದ ಸಂತಸ ವ್ಯಕ್ತಪಡಿಸಿದರು.
ಸಂಗೀತ ಮಾಂತ್ರಿಕ ಸಾಧುಕೋಕಿಲ ಹಂಪಿ ಉತ್ಸವಕ್ಕೆ ಈ ಗೀತ ಸಂಯೋಜನೆ ರಾಷ್ಟ್ರಗೀತೆ ಇದ್ದಂತೆ ಎಂದು ಪ್ರಶಂಸೆ ವ್ಯಕ್ತಪಿಡಿದರು. ಪವೀಣ್ ಡಿ ರಾವ್ ಅನುಪಸ್ಥತಿಯಲ್ಲಿ ಅವರ ಕಲಾತಂಡಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇಣು ವಾದನಗಳ ಸಮ್ಮಿಳನದ ಸಂಗೀತ ಸಂಯೋಜನೆ:-
ಖ್ಯಾತ ಕೊಳಲು ವಾದಕ ಪಂಡಿತ ಪ್ರವೀಣ್ ಗೋಳ್ಕಿಂಡಿ ನೇತೃತ್ವದ 22 ಕಲಾವಿದರು, ಸಪ್ತ ಸ್ವರಗಳನ್ನು ಪ್ರತಿನಿಧಿಸುವ ವೇಣು ವಾದನದ ಸಮ್ಮಿಳದ ಸಂಗೀತ ಸಂಯೋಜನೆ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.
ಕೊಳಲು ವಾದಕರ ಶಿಸ್ತುಬದ್ದ ಮಧುರ ವೇಣು ವಾದನದ ಸಂಯೋಜನೆ ಹಾಗೂ ಗಾಯಕರ ಸಪ್ತಸ್ವರದ ಗಾಯನ, ಹಂಪಿಯ ಕಲ್ಲು ಬಂಡೆಗಳಲ್ಲಿ ಪ್ರತಿಧ್ವನಿಸಿ, ತುಂಗಾ ನದಿಯ ಜುಳು ಜುಳು ಕಲರವದಲ್ಲಿ ಮಿಂದು, ಪಂಪಾಪತಿ ವಿರೂಪಾಕ್ಷನ ಪದತಲಕ್ಕೆ ಎರೆಗಿತು.