ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನ ಸರ್ವರ್ ಕೈಕೊಟ್ಟಿದ್ದು , ರಾಜ್ಯಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ದಾಖಲೆಗಳನ್ನು ಅಪ್ಲೋಡ್ ಮಾಡಲು ರಾಜ್ಯಾದ್ಯಂತ ವಿದ್ಯಾರ್ಥಿಗಳು ಪರದಾಟ ನಡೆಸಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಪ್ರಾಧಿಕಾರಕ್ಕೆ ಮೊರೆಯಿಟ್ಟಿದ್ದಾರೆ.
ಏ. 18-19 ರಂದು ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಅರ್ಜಿ ಸಲ್ಲಿಕೆಗೆ ಫೆ.9 ಕೊನೆಯ ದಿನಾಂಕವಾಗಿದೆ. ಏಕಕಾಲದಲ್ಲಿ ಎಸ್ಟಿಎಸ್ ತಂತ್ರಾಂಶವನ್ನು ಬಳಕೆ ಮಾಡುತ್ತಿರುವುದರಿಂದ ಈ ಸಮಸ್ಯೆ ತಲೆದೋರಿದ್ದು, ಕಳೆದ ನಾಲ್ಕೈದು ದಿನಗಳಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿದ್ದಾರೆ.
ಸಿಇಟಿ-24 ಆನ್ಲೈನ್ ಅರ್ಜಿ ಸಲ್ಲಿಕೆ ವಿಷಯವಾಗಿ ತಾಂತ್ರಿಕ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಇಎ ತಿಳಿಸಿದೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ-24 ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಒಂದೆರಡು ದಿನ ಸರ್ವರ್ ಡೌನ್ ಸಮಸ್ಯೆ ಇದ್ದಿದ್ದು ಹೌದು,ಈಗ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಅವರು ವಿವರಿಸಿದರು.ಈ ತಾಂತ್ರಿಕ ಸಮಸ್ಯೆ ನಿರಂತರವಾಗಿ ಇರಲಿಲ್ಲ. ಆದರೆ ಆಗಾಗ ಕಂಡುಬರುತ್ತಿತ್ತು. ಈಗ ಅದನ್ನು ಕೂಡ ಸರಿಪಡಿಸಲಾಗಿದೆ. ಇದುವರೆಗೆ, 1.25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು 98,000 ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿದ್ದಾರೆ. ಶುಲ್ಕ ಪಾವತಿಯಾದರೆ ಅರ್ಜಿ ಪರಿಶೀಲನೆ ಯಶಸ್ವಿಯಾಗಿ ಮುಗಿದಿದೆ ಎಂದೇ ಅರ್ಥ ಎಂದು ರಮ್ಯಾ ವಿವರಿಸಿದರು.