ಬೆಂಗಳೂರು: ಬಿಜೆಪಿ ಅವರು ನಮ್ಮ ಸರ್ಕಾರದ ಗ್ಯಾರಂಟಿಗಳನ್ನು ಮೊದಲು ಟೀಕೆ ಮಾಡಿ ಈಗ ನಮ್ಮ ಗ್ಯಾರಂಟಿ ನೋಡಿಕೊಂಡು ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಎಂದು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ನಲ್ಲಿ ನಡೆದ 100 ಅಶ್ವಮೇಧ ಕ್ಲಾಸಿಕ್ ಬಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಕೇಂದ್ರ ಜನರ ಮೇಲೆ ಬೃಹತ್ ಪ್ರಮಾಣದ ಸಾಲ ಹೊರಿಸಿದೆ. 2014ರಲ್ಲಿ 53.11 ಲಕ್ಷ ಕೋಟಿ ಸಾಲ ಇತ್ತು. ಈ ಆರ್ಥಿಕ ವರ್ಷದಲ್ಲಿ, ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದಾಖಲೆಗಳ ಪ್ರಕಾರ ಸಾಲವು 174 ಲಕ್ಷ ಕೋಟಿಯಷ್ಟಾಗಿದೆ. ಮೋದಿ ಅವಧಿಯಲ್ಲಿ 120 ಕೋಟಿ ಲಕ್ಷ ಸಾಲ ಮಾಡಲಾಗಿದೆ. ಆರ್ಬಿಐ ನೀಡಿರುವ ದಾಖಲೆಗಳ ಪ್ರಕಾರ 2014ರಲ್ಲಿ ರಾಜ್ಯಗಳ ಸಾಲದ ಪ್ರಮಾಣ 25 ಲಕ್ಷ ಕೋಟಿ ಇತ್ತು. ಈ ವರ್ಷದ ಕೊನೆಗೆ ಅದು 85 ಲಕ್ಷ ಕೋಟಿ ದಾಟಲಿದೆ ಎಂದು ತಿಳಿಸಿದೆ. ಅಂದರೆ ಎರಡೂ ಸೇರಿಸಿದ್ರೆ 260 ಲಕ್ಷ ಕೋಟಿ ರೂಪಾಯಿ ಆಗಲಿದೆ. ಹೆಚ್ಚು ಕಡಿಮೆ ದೇಶದ ಜಿಡಿಪಿ ಗಾತ್ರವನ್ನೂ ಕೂಡ ಸಾಲ ಮೀರಿಸುತ್ತಿದೆ. ಇಷ್ಟು ಸಾಲ ಮಾಡಿಯೂ ಬೆಲೆ ಏರಿಕೆ ಆಗಿದೆ ಎಂದರು.
ನಾವು ಚುನಾವಣೆ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆವು.
ಜೂನ್ 11 ಕ್ಕೆ ಇದೇ ಜಾಗದಲ್ಲಿ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿ ಮಾಡಿದೆವು. ಅಲ್ಲಿಂದ ಇಲ್ಲಿಯವರೆಗೆ 146 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಇಷ್ಟು ಜನ ಉಚಿತವಾಗಿ ಪ್ರಯಾಣ ಮಾಡ್ತಾರೆ ಅಂದರೆ ಅವರು ತೆಗೆದುಕೊಳ್ಳಬೇಕಾದ ಹಣ ಉಳಿತಾಯ ಆಗಿದೆ. ಕೋಟಿಗಟ್ಟಲೆ ಹಣ ಹೆಣ್ಣು ಮಕ್ಕಳಿಗೆ ಉಳಿತಾಯವಾಗಿದೆ. ಈ ಉಳಿತಾಯದ ಹಣ ಬೇರೆಯದಕ್ಕೆ ಹೆಣ್ಣುಮಕ್ಕಳು ಖರ್ಚು ಮಾಡಿದ್ದಾರೆ. ನಾವು ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುತ್ತೇವೆ ಎಂದು ಹೇಳಿದೆವು. ಎಲ್ಲಾ ಜಾತಿ, ಧರ್ಮದ, ಪಕ್ಷದ ಬಡವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇವೆ ಎಂದರು.
ಎಲ್ಲಾ ಶಾಸಕರು, ಸಚಿವರು, ಪರಿಷತ್ ಸದಸ್ಯರು ಭಾಗವಹಿಸುತ್ತಾರೆ. ನಾಳೆ ಸಂಜೆ ಎಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ನಾಡಿದ್ದು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣ ಅಂದ್ರೆ ಅದು ರಾಜ್ಯಗಳಿಂದ ವಸೂಲಾಗುವ ತೆರಿಗೆ ಹಣ. ಈ ತೆರಿಗೆ ಜಿಎಸ್ಟಿ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಸೆಸ್ ಗಳಿಂದ ಸಂಗ್ರಹಿಸುವ ಹಣವಾಗಿದೆ. ಹಣಕಾಸು ಆಯೋಗ ರಾಜ್ಯಗಳಿಗೆ ಹೇಗೆ ಹಣ ಹಂಚಿಕೆ ಆಗಬೇಕು ಎಂಬುದನ್ನು ಹೇಳುತ್ತದೆ ಎಂದರು.