ಲಕ್ನೋ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಾಸ್ಕೋದಲ್ಲಿರುವ ಭಾರತೀಯ ರಾಜಭಾರಿ ಕಚೇರಿಯ ಉದ್ಯೋಗಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಮೀರತ್ನಲ್ಲಿ ಬಂಧಿಸಲಾಗಿದ್ದು, ಸತ್ಯೇದ್ರ ಸಿವಾಲ್, 2021 ರಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತ ಆಧಾರಿತ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದ.
ಐಎಸ್ಐ ಹ್ಯಾಂಡ್ಲರ್ಗಳು ಭಾರತೀಯ ವಿದೇಶಾಂಗ ಸಚಿವಾಲಯದ ಉದ್ಯೋಗಿಗಳನ್ನ ತಮ್ಮತ್ತ ಸೆಳೆಯುತ್ತಿದ್ದು, ಅದಕ್ಕಾಗಿ ಹಣದ ಆಮಿಷ ತೋರಿಸುತ್ತಿದ್ದಾರೆ ಎಂಬ ಸೂಕ್ಷ್ಮ ಮಾಹಿತಿ ಭಾರತೀಯ ಸೇನೆ ಹಾಗೂ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಭಯೋತ್ಪಾದನಾ ನಿಗ್ರಹ ದಳ ರಹಸ್ಯವಾಗಿಯೇ ತನ್ನ ಕಾರ್ಯಾಚರಣೆ ಮುಂದುವರಿಸಿತ್ತು.
ಉತ್ತರ ಪ್ರದೇಶ ಹಾಪುರ್ನ ಶಹಮಹಿಯುದ್ದೀನ್ಪುರ ಗ್ರಾಮದ ನಿವಾಸಿಯಾಗಿದ್ದ ಸತೇಂದ್ರ ಸಿವಾಲ್, ಬೇಹುಗಾರಿಕೆ ಜಾಲದ ಪ್ರಮುಖ ರುವಾರಿಯಾಗಿದ್ದ. ಮಾಸ್ಕೋದಲ್ಲಿರುವ ತನ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ತನ್ನ ಸ್ಥಾನವನ್ನು ದುರ್ಬಕೆ ಮಾಡಿಕೊಂಡು ಗೌಪ್ಯ ದಾಖಲೆಗಳನ್ನ ಹೊರ ತೆಗೆಯುತ್ತಿದ್ದ. ಹಣದ ಆಸೆಗಾಗಿ ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ಸೇನೆಯ ಆಂತರಿಕೆ ಮತ್ತು ಬಾಹ್ಯ ಕಾರ್ಯಾಚರಣೆ ಚಟುವಟಿಕೆಗಳ ಬಗ್ಗೆ ಮಾಹಿತಿ ಹೊರತೆಗೆದು ಅದನ್ನು ಐಎಸ್ಐ ಹ್ಯಾಂಡ್ಲರ್ಗಳಿಗೆ ರವಾನಿಸುತ್ತಿದ್ದ ಎಂದು ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಐಎಸ್ಐ ಉಗ್ರರು ಭಾರತೀಯ ಸೇನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉದ್ಯೋಗಿಗಳಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ಇದರಿಂದ ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ದೊಡ್ಡ ಅಪಾಯ ಉಂಟುಮಾಡುವ ಆತಂಕ ಎದುರಾಗುತ್ತಿದೆ ಎಂದು ಕೆಲ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.