ಲಕ್ನೋ: ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳಿಗೆ ಹಣ ನೀಡಿ ದಂಪತಿಗಳಾಗಿ ನಟಿಸಲು ಸೂಚಿಸಿದ ಇಬ್ಬರು ಅಧಿಕಾರಿ ಸೇರಿ 15 ಮಂದಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಉತ್ನ ಬಾಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ಸಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. 568 ಜೋಡಿಗಳ ಮದುವೆ ಸಮಾರಂಭಕ್ಕೆ ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿದ್ದರು.
ಈ ವಿವಾಹ ಕಾರ್ಯಕ್ರಮದಲ್ಲಿ ವಧುಗಳು ತಮಗೆ ತಾವೇ ಹಾರ ಹಾಕಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತನಿಖೆ ನಡೆಸಿ 15 ಮಂದಿಯನ್ನು ಬಂಧಿಸಿದೆ. ಕೆಲವು ಪುರುಷರು ಅವರ ಮುಖಗಳನ್ನು ಮರೆಮಾಚಿ ವರರಂತೆ ಉಡುಪುಗಳನ್ನು ಧರಿಸಿ ನಟಿಸಿದ್ದರು. ಸ್ಥಳೀಯ ನಿವಾಸಿಗಳಿಗೆ ವಧು-ವರರಂತೆ ನಟಿಸಲು 500 ರಿಂದ 2,000 ರೂ. ಹಣವನ್ನು ನೀಡಲಾಗಿತ್ತು. ಸರ್ಕಾರವು ಸಾಮೂಹಿಕ ವಿವಾಹ ಯೋಜನೆಯಡಿ 51,000 ಸಾವಿರ ರೂಪಾಯಿ ನೀಡುತ್ತದೆ.
ಅದರಲ್ಲಿ 35,000 ರೂ. ವಧುವಿಗಾಗಿ ಮತ್ತು 10,000 ರೂ. ಮದುವೆ ಸಾಮಗ್ರಿಗಳನ್ನು ಖರೀದಿಸಲು ಹಾಗೂ 6,000 ಕಾರ್ಯಕ್ರಮಕ್ಕೆಂದು ನೀಡಲಾಗುತ್ತದೆ. ಘಟನೆಯಲ್ಲಿ ಆರೋಪಿಗಳಿಗೆ ಹಣ ವರ್ಗಾವಣೆಯಾಗುವ ಮೊದಲೇ ಈ ಹಗರಣ ಬಯಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಎಲ್ಲಾ ಫಲಾನುಭವಿಗಳನ್ನು ಪರಿಶೀಲಿಸಲು ತಕ್ಷಣ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಸಂಪೂರ್ಣ ತನಿಖೆ ಆಗುವರೆಗೂ ಯಾವುದೇ ಪ್ರಯೋಜನಗಳನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.