ಭೋಪಾಲ್: ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಬೈರಾಗರ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 60 ಮಂದಿ ಗಾಯಗೊಂಡಿದ್ದಾರೆ.
ಪಟಾಕಿ ಕಾರ್ಖಾನೆಯ ಸ್ಫೋಟದ ತೀವ್ರತೆಗೆ ಸುಮಾರು ಅರವತ್ತು ಮನೆಗಳು ನಾಶವಾಗಿವೆ. ಕಾರ್ಖಾನೆಯಲ್ಲಿ ನಿರಂತರ ಸ್ಫೋಟಗಳು ಸಂಭವಿಸಿದ ಕಾರಣ 100ಕ್ಕೂ ಹೆಚ್ಚು ಮನೆಗಳಲ್ಲಿದ್ದ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ವರದಿಯಾಗಿದೆ.
ಆರಂಭದಲ್ಲಿ ಅಗ್ನಿ ಅವಘಡದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.