ಬೆಂಗಳೂರು:- 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಹಲವು ಕಾರಣಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ ಮಾಡಾಳು ಮಲ್ಲಿಕಾರ್ಜುನ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಇದ್ದಂತಹ ವಾತಾವರಣ ಮತ್ತು ಈಗ ಇರುವ ವಾತಾವರಣಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.
ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 20-22 ಕ್ಷೇತ್ರ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದರು. ನಾಲ್ಕು ತಿಂಗಳ ಬಳಿಕ ಈಗ ಎರಡು ಕ್ಷೇತ್ರ ಗೆಲ್ಲುತ್ತದೆ ಅಂತ ಕಾಂಗ್ರೆಸ್ ಮುಖಂಡರೇ ಮಾತಾಡಿಕೊಳ್ಳುತ್ತಿದ್ದಾರೆ. ಇವತ್ತು ಬದಲಾವಣೆ ಗಾಳಿ ಬೀಸಿ ಬಿಜೆಪಿ ಪರವಾದ ವಾತಾವರಣ ಇದೆ ಎಂದರು.
ನರೇಂದ್ರ ಮೋದಿ ಪರವಾದ ಅಲೆ ನೋಡುತ್ತಿದ್ದೇವೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲೂ ತಡಕಾಡುವ ಪರಿಸ್ಥಿತಿ ಇದೆ. ಯಾವುದೇ ಒಂದು ಕ್ಷೇತ್ರ ಗೆಲ್ಲುತ್ತೇವೆ ಎಂಬ ವಿಶ್ವಾಸವೇ ಅವರಲ್ಲಿಲ್ಲ.
ಪಂಚರಾಜ್ಯಗಳ ಚುನಾವಣೆ, ಬಾಲರಾಮನ ಪ್ರತಿಷ್ಠಾಪನೆ ಬಳಿಕ ಇಡೀ ದೇಶದಲ್ಲೇ ಯಾವ ರೀತಿ ವಾತಾವರಣ ಬದಲಾಗಿದೆ ಅಂತ ಗಮನಿಸಿದ್ದೀರಿ. ರಾಜ್ಯದಲ್ಲಿ ಯಾವತ್ತೇ ವಿಧಾನಸಭೆ ಚುನಾವಣೆ ನಡೆಯಲಿ, ಬೇಕಾದರೆ ನಾಳೆಯೇ ನಡೆಯಲಿ 130-140 ಕ್ಷೇತ್ರ ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.