ಬೆಂಗಳೂರು:- ಕುಂಬಾರಪೇಟೆಯಲ್ಲಿ ನಡೆದಿದ್ದ ಜೋಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.
ನ್ಯಾಯಾಲಯದಲ್ಲಿದ್ದ ಕಟ್ಟಡದ ಕೇಸ್ ಎದುರಾಳಿಯ ಪರವಾಗಿ ಆದೇಶ ಹೊರಬಿದ್ದ ಕೋಪ ಹಾಗೂ ಕೊಲೆಯಾಗಿರುವ ವ್ಯಕ್ತಿಯ ಮಾತನ್ನು ಕೇಳಿ ಪತ್ನಿ ತನ್ನನ್ನು ತೊರೆದಿದ್ದಾಳೆ ಎಂದು ಕೋಪಗೊಂಡಿದ್ದ ಆರೋಪಿತನು ಎದುರಾಳಿಯನ್ನು ಕೊಲ್ಲಲು ಹೋಗಿ ಇಬ್ಬರನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಯಾದ ಸುರೇಶ್ ಹಾಗೂ ಸಂಬಂಧಿಕನಾಗಿರುವ ಆರೋಪಿತ ಬದ್ರಿಯ ನಡುವೆ ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹವಿತ್ತು. ನ್ಯಾಯಾಲಯದಲ್ಲಿ ಕೇಸ್ ಸಹ ಇತ್ತು. ಕೇಸ್ ಮೃತನ ಪರವಾಗಿ ಆಗಿದ್ದ ಕಾರಣ ಬದ್ರಿ ಕೋಪ ಗೊಂಡಿದ್ದನು. ಆದಾದ ಮೇಲು ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಸಿಆರ್ಪಿಸಿ 107 ಅನ್ವಯ ಬಾಂಡ್ ಬರೆಸಿಕೊಂಡಿದ್ದ ಪೊಲೀಸರು ಇಬ್ಬರಿಗೂ ವಾರ್ನ್ ಮಾಡಿದ್ದರು. ಮುಂದೆ ಗಲಾಟೆ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.
ಈ ನಡುವೆ ಅರೋಪಿತ ಬದ್ರಿಯನ್ನು ಪತ್ನಿ ತೊರೆದಿದ್ದಾಳೆ. ಸುರೇಶ್ ಮಾತು ಕೇಳಿಯೇ ಆಕೆ ತನ್ನನ್ನು ಬಿಟ್ಟು ಡೈವರ್ಸ್ ಪಡೆಯುವ ಹಂತಕ್ಕೆ ಹೋಗಲು ಕುಟುಂಬದ ಸುರೇಶ್ ಕಾರಣ ಎಂದು ಬದ್ರಿ ಬಾವಿಸಿದ್ದಾನೆ. ಸಂಸಾರ ಹಾಳು ಮಾಡಿದ್ದ ಹಾಗೂ ಕಟ್ಟಡವನ್ನು ನೀಡಿಲ್ಲಾ ಎಂದು ಕೋಪ ಬದ್ರಿಗಿತ್ತು.
ಇನ್ನೊಂದೆಡೆ, ಪೊಲೀಸರಿಗೆ ಹೇಳಿಕೆ ನೀಡಿದ ಬದ್ರಿ ಪತ್ನಿ, ಈತ ಸರಿ ಇಲ್ಲದ ಕಾರಣ ತಾನು ಒಟ್ಟಿಗೆ ಇರುವುದಿಲ್ಲ ಎಂದಿದ್ದಾಳೆ. ಸದ್ಯ, ಪ್ರಕರಣ ಸಂಬಂಧ ಹಲಸೂರು ಗೇಟ್ ಠಾಣಾ ಪೊಲೀಸರಿಂ ತನಿಖೆ ಮುಂದುವರಿದಿದ್ದು, ಮೇಲ್ನೋಟಕ್ಕೆ ಕೊಲೆಯನ್ನು ಒಬ್ಬನೇ ಮಾಡಿರುವುದು ಕಂಡುಬಂದರೂ ಬೇರೆ ಯಾರಾದರು ಪ್ರೇರಣೆ ನೀಡಿದ್ದಾರೆಯೇ ಎಂಬ ವಿಚಾರವಾಗಿ ತನಿಖೆ ಮುಂದುವರಿದಿದೆ.