ಚೆನ್ನೈ: ಬಹುನಿರೀಕ್ಷಿತ ಚಾಲಕ ರಹಿತ ಹಳದಿ ಮೆಟ್ರೋ ರೈಲು ಚೀನಾದಿಂದ ಹೊರಟು ಮಂಗಳವಾರ ಚೆನ್ನೈ ಬಂದರು ತಲುಪಿದೆ. ಬೆಳಗ್ಗೆ ಬೋಗಿಗಳು ಚೆನ್ನೈ ಬಂದರಿಗೆ ಆಗಮಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಈ ಬೋಗಿಗಳನ್ನು ಚೀನಾದಿಂದ ತರಿಸಲಾಗಿದೆ. ಚೆನ್ನೈ ಬಂದರಿನಲ್ಲಿ ಕಾರ್ಗೋ ಶಿಪ್ನಿಂದ (Cargo Ship) ಬೋಗಿಗಳನ್ನು ಅನ್ಲೋಡ್ ಮಾಡಲಾಗಿದೆ. ಇದಾದ ಬಳಿಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರೈಲು ಆಗಮಿಸಲಿದೆ.
ಚೀನಾದಿಂದ ರವಾನೆಯಾದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರಿಗೆ ಆಗಮಿಸಿರುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಖಚಿತಪಡಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಈ ಬೋಗಿಗಳನ್ನು ರಸ್ತೆ ಮೂಲಕ ಬೆಂಗಳೂರಿಗೆ ಸಾಗಿಸಲಾಗುತ್ತದೆ. ಕಸ್ಟಮ್ ಕ್ಲಿಯರೆನ್ಸ್ ಸುಮಾರು 5 ದಿನಗಳನ್ನು ತೆಗೆದುಕೊಳ್ಳಬಹುದು. ಫೆಬ್ರವರಿ 18ರ ಒಳಗೆ ರೈಲು ಬೆಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ತಿಳಿಸಿದ್ದಾರೆ.