ಬೆಂಗಳೂರು: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯಕ್ಕೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದ್ದಾಗ ದೇಶದ ಏಕತೆ ಮತ್ತು ಭದ್ರತೆಗೆ ಎದುರಾಗದ ಬೆದರಿಕೆ ನಾವು ಕನ್ನಡಿಗರಿಗೆ ನ್ಯಾಯಯುತ ಪಾಲು ಕೊಡಿ ಎಂದು ಕೇಳುವಾಗ ಯಾಕೆ ಎದುರಾಗುತ್ತದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿಯವರ ವಿರುದ್ಧ ಪ್ರಶ್ನೆಯೆತ್ತಿದ್ದಾರೆ.
ಜೊತೆಗೆ ಈಗ ನಾಡಿಗೆ ಅನ್ಯಾಯ ಆಗುತ್ತಿಲ್ಲ ಎಂದು ಮಾತನಾಡುತ್ತಿರುವ ಬೊಮ್ಮಾಯಿ ಅವರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಹಿಂದೆ ಆಡಿದ ಮಾತುಗಳ ಪುರಾವೆ ನೀಡಿ ಅವುಗಳನ್ನು ಒಮ್ಮೆ ನೋಡಿ ಎಂದು ಕುಟುಕಿದ್ದಾರೆ.
ಈ ಸಂಬಂಧ ತಮ್ಮ ಫೇಸ್ ಬುಕ್ ಹಾಗು ಎಕ್ಸ್ ( ಟ್ವಿಟ್ಟರ್ ) ನಲ್ಲಿ ಬರೆದಿರುವ ಅವರು ಮೋದಿ ಅವರ ಎರಡು ಮುಖಗಳನ್ನು ಸಾಕ್ಷಿ ಸಮೇತ ತೆರೆದಿಟ್ಟಿದ್ದು ಹೀಗೆ;
ತೆರಿಗೆ ಹಂಚಿಕೆಯೂ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸರ್ಕಾರ ನಡೆಸಿದ್ದ ‘’ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ.
ಇದೇ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ನೀಡಿರುವ ಹೇಳಿಕೆಗಳನ್ನು ಅವರ ಗಮನಕ್ಕೆ ತರಬಯಸುತ್ತೇನೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಹೇಳಿಕೆಗಳು ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರಲಿಲ್ಲವೇ? ದಯವಿಟ್ಟು ಉತ್ತರ ಕೊಡಿ.
ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ ನರೇಂದ್ರ ಮೋದಿ ಅವರು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಡಿಸೆಂಬರ್ ಆರರಂದು ಹೇಳಿಕೆಯೊಂದನ್ನು ನೀಡಿ ‘’ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಪ್ರಶ್ನಿಸಿದ್ದರು.
2008ರಲ್ಲಿ ವಡೋದರಾದ ಸಮಾರಂಭದಲ್ಲಿ ಮಾತನಾಡುತ್ತಾ ‘ಗುಜರಾತ್ ರಾಜ್ಯ ಪ್ರತಿವರ್ಷ ರೂ.40,000 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸುತ್ತಿದೆ. ಅದರಲ್ಲಿ ಕೇವಲ ಶೇಕಡಾ 2.5ರಷ್ಟು ಮಾತ್ರ ರಾಜ್ಯಕ್ಕೆ ವಾಪಸು ನೀಡಲಾಗುತ್ತದೆ. ಇಷ್ಟು ಜುಜುಬಿ ಮೊತ್ತವನ್ನು ವಾಪಸು ನೀಡುವ ಬದಲಿಗೆ ಒಂದು ವರ್ಷದ ಅವಧಿಗೆ ನಮ್ಮ ತೆರಿಗೆಯನ್ನು ನಾವೇ ಬಳಸಿಕೊಳ್ಳಲು ಅವಕಾಶ ನೀಡಬಾರದೇಕೆ? ಎಂದು ಕೇಂದ್ರ ಸರ್ಕಾರದ ಅಸ್ತಿತ್ವನ್ನೇ ಪ್ರಶ್ನಿಸಿದ್ದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಜನವರಿ ಒಂಭತ್ತರಂದು ನಡೆದಿದ್ದ ಹತ್ತನೇ ಪ್ರವಾಸಿ ಭಾರತೀಯ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಕೇಂದ್ರ ಸರ್ಕಾರ ಇಲ್ಲವೆ ಪ್ರಧಾನಮಂತ್ರಿಯವರಿಂದ ನಮಗೆ ಚಿಕ್ಕಾಸಿನ ನೆರವು ಸಿಗುತ್ತಿಲ್ಲ. ನಾವು ನಮ್ಮ ಸಂಪನ್ಮೂಲವನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ವಿದೇಶಿ ಗಣ್ಯರಿದ್ದ ವೇದಿಕೆಯಲ್ಲಿಯೇ ದೂರಿದ್ದರು.
ಹದಿನಾಲ್ಕನೇ ಹಣಕಾಸು ಆಯೋಗದ ಜೊತೆಗಿನ ಮಾತುಕತೆಯಲ್ಲಿ ಇದೇ ನರೇಂದ್ರ ಮೋದಿಯವರು ‘ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸುವ ತೆರಿಗೆಯಲ್ಲಿ ಕನಿಷ್ಠ ಶೇಕಡಾ 32 ರಿಂದ 50ರ ವರೆಗೆ ರಾಜ್ಯಕ್ಕೆ ಪಾಲು ನೀಡಬೇಕು’ ಎಂದು ವಾದಿಸಿದ್ದರು.
‘’ತೆರಿಗೆ ಹಂಚಿಕೆಗೆ ಅನುಸರಿಸಲಾಗುತ್ತಿರುವ ಮಾನದಂಡವನ್ನು ಹಣಕಾಸು ಆಯೋಗ ಬದಲಾವಣೆ ಮಾಡಬೇಕು, ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮತ್ತು ಅಭಿವೃದ್ದಿ ಕಾರ್ಯಗಳನ್ನು ನಡೆಸುವ ರಾಜ್ಯಗಳಿಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು. ಹಣಕಾಸು ನಿರ್ವಹಣೆಯಲ್ಲಿ ಸೋತಿರುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡುತ್ತಿರುವ ರಾಜ್ಯಗಳನ್ನು ನಿರ್ಲಕ್ಷಿಸುವ ಈಗಿನ ತೆರಿಗೆ ಹಂಚಿಕೆ ವಿಧಾನವನ್ನು ಬದಲಿಸಬೇಕಾಗಿದೆ. ಮೂಲಸೌಕರ್ಯಗಳ ಸುಧಾರಣೆ ಮತ್ತು ದೇಶದ ಅಭಿವೃದ್ದಿಗೆ ಗಣನೀಯ ಕೊಡುಗೆಗಳನ್ನು ನೀಡುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು’’ ಎಂದು ಹಣಕಾಸು ಆಯೋಗದ ಮುಂದೆ ವಾದ ಮಾಡಿದ್ದರು. ಇದು ಕೇಂದ್ರ ಸರ್ಕಾರದ ವಿರುದ್ಧದ ನಿಲುವಲ್ಲವೇ?