ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವುದಾಗಿ ಯತಿ ಕಂಟೋನ್ಮೆಂಟ್ ಪೀಠಾಧೀಶ್ವರ ಜಗದ್ಗುರು ಪರಮಹಂಸ ಆಚಾರ್ಯ ಘೋಷಿಸಿದ್ದಾರೆ.
ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಅವರು, ರಾಯ್ ಬರೇಲಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ರಾಯ್ ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಕೊನೆಯ ವಿಕೆಟ್ ಅನ್ನು ಉರುಳಿಸುವುದಾಗಿ ತಿಳಿಸಿದ್ದಾರೆ.
1966ರ ನವೆಂಬರ್ 7ರಂದು ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಈ ಸಮಯದಲ್ಲಿ ನಾವು ಸಂತರು ಮತ್ತು ಋಷಿಮುನಿಗಳು ಕಾಂಗ್ರೆಸ್ ನಿಂದ ತುಂಬಾ ನೊಂದಿದ್ದೇವೆ ಎಂದಿದ್ದಾರೆ.
ಧರ್ಮ ಸಾಮ್ರಾಟ್ ಸ್ವಾಮಿ ಕರ್ಪಾತ್ರಿ ಜೀ ಅವರ ನೇತೃತ್ವದಲ್ಲಿ ದೇಶದ ಮೂಲೆ ಮೂಲೆಯಿಂದ ಯುವಕರು, ರೈತರು, ತಾಯಂದಿರು, ಸಹೋದರಿಯರು ಮತ್ತು ಹಿರಿಯರು ಗೋಹತ್ಯೆ ತಡೆಯಲು ದೆಹಲಿ ಸಂಸತ್ ಭವನವನ್ನು ತಲುಪಿದ್ದರು ಆಗ ಅಲ್ಲಿ ಅವರ ಮೇಲೆ ಗುಂಡುಗಳನ್ನು ಹಾರಿಸಲಾಯಿತು. ಅದಕ್ಕಾಗಿಯೇ ನಾನು ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಆಚಾರ್ಯರು ತಿಳಿಸಿದ್ದಾರೆ.