ವಾಹನ ಮಾಲೀಕರಿಗೆ ಪೊಲೀಸ್ ಇಲಾಖೆ ಶಾಕಿಂಗ್ ಸುದ್ದಿ ಕೊಟ್ಟಿದೆ. ನಿರಂತರವಾಗಿ ನಿಯಮ ಉಲ್ಲಂಘಿಸಿ 50,000 ರೂ. ವರೆಗೆ ಫೈನ್ ಇದ್ದರೆ, ಅಂಥವರ ಮನೆಗೆ ತೆರಳಿ ಪೊಲೀಸರು ದಂಡ ವಸೂಲಿ ಮಾಡಲಿದ್ದಾರೆ. ಕೆಲವರಿಗೆ ಹೆಲ್ಮೆಟ್ ಎಂದರೆ ಅಲರ್ಜಿ. ಸಿಗ್ನಲ್ ಜಂಪ್, ತ್ರಿಪಲ್ ರೈಡಿಂಗ್ ಇನ್ನೂ ನಿಂತಿಲ್ಲ. ಇಷ್ಟೆಲ್ಲಾ ನಿಯಮಗಳ ಉಲ್ಲಂಘನೆ ಮಾಡಿದವರ ಫೈನ್ ಲಿಸ್ಟ್ ಕೂಡ ದೊಡ್ಡದಿರುತ್ತದೆ.
ಇನ್ಮುಂದೆ ದಂಡ ವಸೂಲಿಗಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರೇ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ದಂಡದ ಮೊತ್ತ 50,000 ರೂ. ದಾಟಿದರೆ ಮನೆಗೆ ತೆರಳಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಪೊಲೀಸರು. ಕಳೆದ ಹತ್ತು ದಿನಗಳಿಂದ ನಗರದಲ್ಲಿ 2,681 ವಾಹನಗಳ ಮೇಲೆ 50,000 ರೂ.ಗೂ ಅಧಿಕ ದಂಡ ಇದೆ. ಈಗಾಗಲೇ ಅನೇಕ ವಾಹನ ಸವಾರರ ಮನೆಗೆ ತೆರಳಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕೆಲ ವಾಹನಗಳ ಮಾಲೀಕರು ದಂಡ ಪಾವತಿಸದೆ ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.
ಇಂಥವರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಆರು ವಯಸ್ಸಿಗಿಂತ ಚಿಕ್ಕ ಮಕ್ಕಳಿಗೆ ಹೆಲ್ಮೆಟ್ ಧರಿಸುವ ಅಗತ್ಯವಿಲ್ಲ. ಆದರೆ ಶಾಲಾ ಮಕ್ಕಳು ಎಂದು ಇಬ್ಬರು, ಮೂವರನ್ನು ಕರೆದೊಯ್ಯುವುದು ಸರಿಯಲ್ಲ. ಸುರಕ್ಷಿತವೂ ಅಲ್ಲ. ಶಾಲಾ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗಲೂ ಕ್ಷಮತೆ ಮೀರಿ ಮಕ್ಕಳನ್ನ ಕೊಂಡೊಯ್ಯುವುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.