ಕನ್ನಡಿಗರ ಶ್ರಮದ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ರವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ಗಳ ಮೂಲಕ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ದಿನದ 24 ಗಂಟೆ ಟಿವಿಯಲ್ಲಿ ಹಾಗೂ ದಿನಪತ್ರಿಕೆ ಗಳಲ್ಲಿ ಮೋದಿ ಗ್ಯಾರಂಟಿ ಎಂಬ ಜಾಹೀರಾತು ಪ್ರಸಾರ ಮಾಡಲು,
ವೆಚ್ಚ ಮಾಡುತ್ತಿರುವ ದುಡ್ಡು ಯಾರ ಶ್ರಮದ ತೆರಿಗೆ ಹಣ? ಮೋದಿಯವರು ಅವರ ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ? ಮೋದಿಯವರು `ಮೋದಿ ಗ್ಯಾರಂಟಿ’ ಎಂಬ ಜಾಹೀರಾತಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಹಣ ಜನರ ಶ್ರಮದ ತೆರಿಗೆ ಹಣವೇ ಅಲ್ಲವೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದ ಹಣಕಾಸು ಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿರುವ ನಿರ್ಮಲಾರವರೆ, ಮೋದಿ ಸರ್ಕಾರ ಕೇವಲ ಜಾಹೀರಾತುಗಳಿಗಾಗಿಯೇ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಬಗ್ಗೆ ಶ್ವೇತಪತ್ರದಲ್ಲಿ ಯಾಕೆ ಉಲ್ಲೇಖವಿಲ್ಲ? ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವುದು ಸರ್ಕಾರದ ಹಣವೋ ಅಥವಾ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಹಣವೋ? ಶ್ವೇತಪತ್ರದಲ್ಲಿ ಜಾಹೀರಾತಿಗೆ ಖರ್ಚು ಮಾಡುತ್ತಿರುವುದು ಯಾವ ಹಣ ಹಾಗೂ ಯಾರ ಹಣ ಎಂದು ಸಾರ್ವಜನಿಕರ ಮುಂದೆ ತೆರೆದಿಡಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.