ಬೆಂಗಳೂರು:- ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನು ಕಂತುಗಳಲ್ಲಿ ಹೇಳುವುದನ್ನು ಬಿಟ್ಟು ಒಂದೇ ಬಾರಿ ನೇರವಾಗಿ, ಸ್ಪಷ್ಟವಾಗಿ ಹೇಳಿಬಿಡಬೇಕು. ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಆ ರಾಜ್ಯಗಳಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ತಮ್ಮ ದಮ್ಮು, ತಾಕತ್ತು ತೋರಿಸಬೇಕು. ಆಗಾಗ ಗೊಣಗಾಡಿಕೊಂಡರೆ ಏನು ಫಲ? ಇದೀಗ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ‘ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ’ ಎಂದು ನಮ್ಮ ಸರ್ಕಾರದ ಬಗ್ಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ.
ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ. ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ನಾನು ಸಾಬೀತು ಮಾಡಬಲ್ಲೆ. ಇದು ಅಮಿತ್ ಶಾ ಅವರಿಗೆ ನನ್ನ ಸವಾಲು ಕೂಡಾ ಹೌದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಬಗ್ಗೆ ಮಾತನಾಡುವಾಗ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ನಾಯಕರು ತಮ್ಮ ಆಳ್ವಿಕೆಯ ರಾಜ್ಯಗಳಲ್ಲಿ ಅದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಗ್ಯಾರಂಟಿಯ ಯೋಜನೆಗಳನ್ನು ಮಾತ್ರ ಅಲ್ಲ, ಗ್ಯಾರಂಟಿ ಎಂಬ ಹೆಸರನ್ನೂ ಕದ್ದು ಈಗ ಅದೇ ಹೆಸರಲ್ಲಿ ಜಾಹೀರಾತು ನೀಡಿದ್ದಾರೆ. ಇದು ಆ ಪಕ್ಷದ ಬಡಜನ ವಿರೋಧಿ ನಿಲುವು ಮತ್ತು ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರು ನಿಜವಾಗಿ ವಿರೋಧಿಸುವುದು ಗ್ಯಾರಂಟಿ ಯೋಜನೆಗಳನ್ನಲ್ಲ, ಅವರ ಕೆಂಗಣ್ಣು ಬಿದ್ದಿರುವುದು ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆ ಎಂದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ‘ಗರೀಬಿ ಹಠಾವೋ’ ಎಂದು ಕರೆ ನೀಡಿದಾಗಲೂ ಇದೇ ಪರಿವಾರದವರು ಅದನ್ನು ವಿರೋಧಿಸಿದ್ದರು. ಭೂ ಸುಧಾರಣೆ, ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಯಾವುದೇ ಕಾರ್ಯಕ್ರಮಗಳಿದ್ದರೂ ಇವರ ವಿರೋಧ ಇದ್ದೇ ಇದೆ. ಇದಕ್ಕೆ ಬಡವರೇ ತಕ್ಕ ಉತ್ತರವನ್ನು ಕೊಡಬೇಕು. ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ ಬಿಜೆಪಿ ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.