ಬೆಂಗಳೂರು: ರಾಜ್ಯ ಸರಕಾರ ಸಂಸದೀಯ ಚೌಕಟ್ಟಲ್ಲಿ ಘನತೆಯನ್ನು ಮರೆತು, ಕೇಂದ್ರದ ವಿರುದ್ಧ ಸಂಘ ರ್ಷ ಸಾರುವ ಸುಳಿವನ್ನು ರಾಜ್ಯಪಾಲರ ಮೂಲಕ ಹೇಳಿರುವುದು ಕೆಟ್ಟ ಪರಿಪಾಠ ಆಗಿದೆ ಎಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ, ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ ಎ ಶರವಣ ಟೀಕಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ಸಂಸದೀಯ ಪರಂಪರೆಯಲ್ಲಿ ಘನತೆ ಇರುತ್ತದೆ. ಭಾಷಣವನ್ನು ಸರಕಾರ ಸಿದ್ಧಪಡಿಸುವ ಪರಿಪಾಠ ಇದೆ. ಹೀಗೆಂದ ಮಾತ್ರಕ್ಕೆ ಏನೇನೋ ಬರೆದು ರಾಜ್ಯಪಾಲರ ಬಾಯಲ್ಲಿ ಹೇಳಿಸುವುದು ಸರಿಯಲ್ಲ ಎಂದು ಶರವಣ ಆಕ್ಷೇಪಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಘರ್ಷ ಬೀದಿ ಕಾಳಗ ಆಗಬಾರದು. ಈ ವಿಚಾರವನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಭೀಕರ ಬರಕ್ಕೆ ಜನ ತತ್ತರಿಸಿದ್ದಾರೆ. ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಇಂಥ ದಯನೀಯ ಸ್ಥಿತಿ ಇರಬೇಕಾದರೆ , ಬಡತನದ ರೇಖೆಯಿಂದ 1.2 ಕೋಟಿ ಜನ , ಮದ್ಯಮ ವರ್ಗಕ್ಕೆ ಬಂದಿದ್ದಾರೆ. ಇದು ಜಾಗತಿಕ ದಾಖಲೆ ಎಂದು ಹೇಳಿರುವ ಸರಕಾರದ ಹೇಳಿಕೆ ಹಾಸ್ಯಾಸ್ಪದ. ಇದಕ್ಕೆ ನಗಬೇಕೋ ..ಅಳಬೇಕೋ ಅರ್ಥವಾಗುತ್ತಿಲ್ಲ ಎಂದವರು ವಿಶ್ಲೇಷಿಸಿದ್ದಾರೆ.
ರಾಜ್ಯಪಾಲರ ಬಾಯಲ್ಲಿ ಸರಕಾರ ಹಸೀ ಸುಳ್ಳು ಗಳನ್ನು ಹೇಳಿಸಿದೆ. ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆಗಿರುವ ಬಗ್ಗೆ ಸರಕಾರ ಅಧಿಕೃತ ಹೇಳಿಕೆ ಮಂಡಿಸಲಿ. ರಸ್ತೆ, ಶಾಲೆಗಳ ನಿರ್ಮಾಣ, ನೀರಾವರಿ, ಸಮಾಜ ಕಲ್ಯಾಣ , ಎಸ್.ಸಿ, ಎಸ್ಟಿ ಗಳ ಅಭಿವೃದ್ದಿಗೆ ಎಷ್ಟು ಖರ್ಚು ಮಾಡಿದೆ ಎನ್ನುವ ವಿವರ ನೀಡಲಿ. ಆಗ ಇವರ ಬಣ್ಣ ಬಯಲಾಗುತ್ತದೆ ಎಂದು ಗೇಲಿ ಮಾಡಿದ್ದಾರೆ