ನವದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಜೈಪುರದಿಂದ ನಾಮಪತ್ರ ಸಲ್ಲಿಸಿದ ಸೋನಿಯಾ ಜತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದರು. ಮಾಜಿ ಕಾಂಗ್ರೆಸ್ ಅಧ್ಯಕ್ಷರು ರಾಜಸ್ಥಾನದಿಂದ ಸಂಸತ್ತಿನ ಮೇಲ್ಮನೆ ಯಲ್ಲಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಾರೆ. 1998 ಮತ್ತು 2022 ರ ನಡುವೆ ಸುಮಾರು 22 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಐದು ಬಾರಿ ಲೋಕಸಭಾ ಸಂಸದರಾಗಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಳೆದ ವಾರ ಸೋನಿಯಾ ಗಾಂಧಿ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಖಮ್ಮಂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. 15 ರಾಜ್ಯಗಳ 56 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ಫೆಬ್ರವರಿ 27 ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.
1999 ರಿಂದ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಯನ್ನು ಗೆಲ್ಲುತ್ತಾ ಬಂದಿದ್ದಾರೆ. 1999 ರಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದ ಅವರು 2004ರ ಚುನಾವಣೆಯಿಂದ 2019ರ ಚುನಾವಣೆಯವರೆಗೂ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಸತತವಾಗಿ ಆಯ್ಕೆ ಆಗಿದ್ದರು. ಅನಾರೋಗ್ಯ ಕಾರಣದಿಂದ 2024ರ ಲೋಕಸಭಾ ಚುನಾವಣೆಗೆ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡಿತ್ತು.