ಮಕ್ಕಳ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ, ದೇಹದಲ್ಲಿ ಏನೇ ಸ್ವಲ್ಪ ಏರುಪೇರಾದರೂ ದೊಡ್ಡ ಅಪಾಯವನ್ನೇ ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಪೋಷಕರ ನಿದ್ದೆಗೆಡಿಸಿದೆ
ಪ್ರತಿ ವರ್ಷ ಸರಾಸರಿ 500 ಪ್ರಕರಣಗಳು ಹೊಸದಾಗಿ ನೋಂದಣಿಯಾಗುತ್ತಿವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ. ಫೆ.15ರಂದು ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಪ್ರಯುಕ್ತ ಸಂಸ್ಥೆಯು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸರಿಯಾದ ಸಮಯದಲ್ಲಿ ಚಿಕಿತ್ಸೆ ಮತ್ತು ರೋಗನಿರ್ಣಯವು ಮುಖ್ಯವಾಗಿದೆ ಇದು ಒಂದು ಮಗುವಿನ ಭವಿಷ್ಯವನ್ನು ನಿರ್ಧರಿಸುತ್ತದೆ.
ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯು ವಿವರಿಸಿದಂತೆ, ಲ್ಯುಕೇಮಿಯಾವು ಮಕ್ಕಳ ರಕ್ತದಲ್ಲಿರುವ ಬಿಳಿ ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ.
ಸಂಸ್ಥೆಯ ಮಕ್ಕಳ ಗಂಥಿ ವಿಜ್ಞಾನ ವಿಭಾಗದ ದಾಖಲಾತಿ ಪ್ರಕಾರ ಕಳೆದ ವರ್ಷ 1,800 ಹೊರರೋಗಿಗಳು ಭೇಟಿ ನೀಡಿದ್ದಾರೆ. ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಹೆಚ್ಚಿನವರು ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ ಮತ್ತು ಲಿಂಪೋಮಾ), ಮಿದುಳು ಕ್ಯಾನ್ಸರ್ಗೆ ಒಳಗಾಗುತ್ತಿದ್ದಾರೆ.
‘ಯಾವುದೇ ಶಂಕಿತ ಕ್ಯಾನ್ಸರ್ ಗೆಡ್ಡೆ ಇದ್ದರೆ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು. ತಡವಾಗಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಿದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಸಾರ್ವಜನಿಕರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಸಂಸ್ಥೆ ನಿರ್ದೇಶಕ ಸೈಯದ್ ಅಲ್ತಾಫ್ ತಿಳಿಸಿದ್ದಾರೆ.
‘ಸಂಸ್ಥೆಗೆ ಚಿಕಿತ್ಸೆಗಾಗಿ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ಜನರು ಬರುತ್ತಿದ್ದಾರೆ. ಸಂಸ್ಥೆಯಲ್ಲಿ 16 ಬೆಡ್ಗಳ ಮಕ್ಕಳ ತೀವ್ರ ನಿಗಾ ಘಟಕ (ಪಿಐಸಿಯು) ಇದೆ. 75 ಬೆಡ್ಗಳ ಕಪೂರ್ ವಾರ್ಡ್ ಮಕ್ಕಳ ಚಿಕಿತ್ಸೆಗೆ ಸಹಕಾರಿಯಾಗಿದೆ. ಸದ್ಯ ಸಂಸ್ಥೆಯಲ್ಲಿ ‘ಆಟೋಲೋಗಸ್’ ಕಸಿ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ‘ಅಲೋಜೆನಿಕ್’ ಕಸಿ ಪ್ರಾರಂಭಿಸಲಾಗುವುದು’ ಎಂದು ಹೇಳಿದ್ದಾರೆ.