ಪ್ರೇಮಿಗಳ ದಿನ ಅಂಗವಾಗಿ ಬೆಂಗಳೂರಿನಿಂದ 2.9 ಕೋಟಿ ಗುಲಾಬಿ ರಫ್ತಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 12,22,860 ಕೆಜಿ ತೂಕದ ಸುಮಾರು 2.9 ಕೋಟಿ ಗುಲಾಬಿ ಹೂಗಳು ಹೊರ ರಾಜ್ಯ ಮತ್ತು ವಿದೇಶಕ್ಕೆ ರಫ್ತಾಗಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ವರದಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ108 ರಷ್ಟು ರಫ್ತು ಹೆಚ್ಚಾಗಿದೆ. ಇನ್ನು ಹೊರ ರಾಜ್ಯಗಳಿಗೆ 2 ಕೋಟಿ ಗುಲಾಬಿ ಹೂಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 148 ರಷ್ಟು ಹೆಚ್ಚಳವಾಗಿದೆ. ಗುಲಾಬಿ ಹೂಗಳು ಬೆಂಗಳೂರಿನಿಂದ, ಕೌಲಾಲಂಪುರ್ (ಮಲೇಷ್ಯಾ), ಸಿಂಗಾಪುರ್, ಕುವೈತ್, ಮನಿಲಾ (ಫಿಲಿಪೈನ್ಸ್), ಮತ್ತು ಶಾರ್ಜಾ (ಯುಎಇ) ದೇಶಗಳಿಗೆ ರಪ್ತಾಗುತ್ತವೆ. ಇನ್ನು ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ ಮತ್ತು ಜೈಪುರ ರಾಜ್ಯಗಳಿಗೆ ರಫ್ತಾಗುತ್ತವೆ.
ಬೆಂಗಳೂರಿನ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೆ ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಂದ ಗುಣಮಟ್ಟದ ಗುಲಾಬಿಗಳನ್ನು ಕಳುಹಿಸಲಾಗುತ್ತದೆ. ಗುಲಾಬಿ ಬೆಳೆಗೆ ತೋಟಗಾರಿಕೆ ಇಲಾಖೆ ನೆರವಿನಿಂದ ಅನೇಕ ರೈತರು ಸಬ್ಸಿಡಿ ಆಧಾರದಲ್ಲಿ ಹಸಿರುಮನೆಗಳನ್ನು ನಿರ್ಮಿಸಿಕೊಂಡಿದ್ದು, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಲಾಭ ಕಾಣುತ್ತಿದ್ದಾರೆ.