ವಿಧಾನಪರಿಷತ್: ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ಭಾರೀ ಅನ್ಯಾಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತು ವಿಧಾನಪರಿಷತ್ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಗದ್ದಲ, ಕೋಲಾಹಲ, ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ನಡೆದು ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ಜರುಗಿತು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಅವರು ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನ ಮೊತ್ತದ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಸದನದಲ್ಲಿ ಸುದೀರ್ಘ ಉತ್ತರ ನೀಡಿದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರದಿಂದ ನಮಗೆ ಒಟ್ಟು 11,495 ಕೋಟಿ ಹಣ ಬರಬೇಕು. ಆದರೆ ಒಂದೇ ಒಂದು ರೂಪಾಯಿಯೂ ಕೊಡದಿರುವ ಕಾರಣ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ ಎಂದು ಆರೋಪಿಸಿದರು.