ಬೆಂಗಳೂರು: ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದಕ್ಕೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ಗೆಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ್ದಾರೆ. ಫೆ.19 ರಂದು ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಕಳೆದ ವಾರ ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court) ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿತು ಮತ್ತು ಫೆಬ್ರವರಿ 26 ರಂದು ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆಯೂ ಸೂಚಿಸಿತ್ತು
ಈ ಆದೇಶದ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 141 (ಕಾನೂನುಬಾಹಿರ ಸಭೆ) ಯಾವುದೇ ಅಂಶಗಳನ್ನು ಪ್ರಕರಣದಲ್ಲಿ ಪೂರೈಸಲಾಗಿಲ್ಲ, ಮುಖ್ಯವಾಗಿ ಸಭೆ ಹಿಂಸಾಚಾರಕ್ಕೆ ಕಾರಣವಾಯಿತು ಎಂಬ ಯಾವುದೇ ಆರೋಪವಿಲ್ಲ, ದೂರುದಾರರು ರಾಜಕೀಯ ವರಿಷ್ಠರ ಆದೇಶದ ಮೇರೆಗೆ ದೂರು ದಾಖಲಿಸಿರಬಹುದು ಎಂದು ಸಿದ್ದರಾಮಯ್ಯ ಅರ್ಜಿಯಲ್ಲಿ ಆರೋಪಿಸಿದ್ದಾರೆ.