ಬೆಂಗಳೂರು: ಎಲ್ಲವೂ ಅಂದುಕೊಂಡಂತೆಯೇ ಆದರೆ ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ವಾಟರ್ ಮೆಟ್ರೋ ಬರಲಿದೆ. ಈ ಮೂಲಕ ಮಂಗಳೂರಿಗೂ ವಾಟರ್ ಮೆಟ್ರೋ ಪ್ರಯಾಣ ಸಾಧ್ಯವಾಗುವ ಲಕ್ಷಣಗಳು ಶುರುವಾಗಿದೆ.
ವಿಧಾನಸಭೆಯಲ್ಲಿ ಇಂದು ದಾಖಲೆಯ 15ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಜಲ ಮೆಟ್ರೋ ಸೇವೆಯನ್ನು ಘೋಷಿಸಿದರು.
ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲ ಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿ ತಯಾರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಶುರುವಾಗಿತ್ತು. ಪ್ರಧಾನಿ ಮೋದಿ ವಾಟರ್ ಮೆಟ್ರೋ ಯೋಜನೆಯನ್ನು ಏಪ್ರಿಲ್ 25ರಂದು ಉದ್ಘಾಟಿಸಿದ್ದರು.
ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳಲ್ಲಿ ಈ ಮೆಟ್ರೋ ಸಂಚಾರ ಮಾಡುತ್ತಿದ್ದು, 8 ಎಲೆಕ್ಟ್ರಿಕ್ ಬೋಟ್ಗಳು, 38 ಟರ್ಮಿನಲ್ಗಳ ಮೂಲಕ ವಾಟರ್ ಮೆಟ್ರೋ ಸೇವೆ ನೀಡುತ್ತಿದೆ.