ಬೆಂಗಳೂರು: ಐದು ಗ್ಯಾರಂಟಿಗಳ ಯಥಾ ಸ್ಥಿತಿ ವಾದಕ್ಕೆ ಸಿಂಹಪಾಲು ಹಣ ನೀಡಿ, ರಸ್ತೆ, ನೀರಾವರಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಬಗ್ಗೆ ಕಳಕಳಿ ಇಲ್ಲದ “ಟುಸ್ ಪಟಾಕಿ ” ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ವಿಧಾನಪರಿಷತ್ ಜೆಡಿಎಸ್ ಉಪ ನಾಯಕ , ಜೆಡಿಎಸ್ ಹಿರಿಯ ಉಪಾಧ್ಯಕ್ಷ ಟಿ. ಎ.ಶರವಣ ಗೇಲಿ ಮಾಡಿದ್ದಾರೆ.
ಸಿದ್ದರಾಮಯ್ಯ ಹಿರಿಯ ರಾಜಕಾರಣಿ ಆಗಿದ್ದು, ಸಂಪನ್ಮೂಲ ಕ್ರೋಢೀಕರಣ ಸಾಧ್ಯವಾಗದೆ ಒದ್ದಾಡಿರುವುದು ಈ ಬಜೆಟ್ನಲ್ಲಿ ವ್ಯಕ್ತ ವಾಗುತ್ತಿದೆ ಎಂದು ಶರವಣ ವಿಶ್ಲೇಷಿಸಿದ್ದಾರೆ.
ನೀರಾವರಿ ಮತ್ತು ಕೃಷಿಗೆ ಈ ಬಜೆಟ್ ನಲ್ಲಿ ಏನೇನೂ ದಕ್ಕಿಲ್ಲ. ರೈತರ ಪಾಲಿಗೆ ಈ ಸರಕಾರ ಶೂನ್ಯ ಕೊಟ್ಟಿದೆ ಎಂದು ಅವರು ಟೀಕಿಸಿದ್ದಾರೆ.
ಬರಗಾಲದಿಂದ ಜನ ತತ್ತರಗೊಂಡ ಈ ಸಂದರ್ಬದಲ್ಲಿ ರೈತರಿಗೆ ಬಜೆಟ್ನಲ್ಲಿ ವಿಶೇಷ ಪ್ಯಾಕೆಜ್ ಕೊಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರೈತರಿಗೆ ಏನೇನೂ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಸಾಲ ಮನ್ನಾ ಮಾಡಬೇಕಾಗಿತ್ತು ಎಂದು ಶರವಣ ಅವರು ವಿಷಾದಿಸಿದ್ದಾರೆ.
ನೀರಾವರಿ ವಿಚಾರದಲ್ಲೂ ಶೂನ್ಯ. ಏನೇನೂ ಇಲ್ಲ. ಬರೀ ಯೋಜನೆಗಳ ಬಗ್ಗೆ ಹೇಳ ಲಾಗಿದೆಯೆ ಹೊರತು ಯಾವ ಯೋಜನೆಗೆ ಎಷ್ಟು ಹಣ ಮೀಸಲು ಎನ್ನುವ ಬಗ್ಗೆ ಮಾಹಿತಿ ಇಲ್ಲವಾಗಿದೆ . ಶುಷ್ಕ, ನೀರಸ, ಅರ್ಥ ರಹಿತ ಬಜೆಟ್ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರವನ್ನು ದುಷಿಸಲೆಂದೆ ಈ ಬಜೆಟ್ ಮಂಡಿಸಲಾಗಿದೆ. ಕೇಂದ್ರ ಸರಕಾರವನ್ನು ಬಜೆಟ್ ಉದ್ದಕ್ಕೂ ಟೀ ಕೆ ಮಾಡಲಾಗಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಸದನದಲ್ಲಿ ಮಂಡಿಸುವ ಆರ್ಥಿಕ ದಾಖಲೆಯಲ್ಲಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರವನ್ನು ಟೀಕಿಸುವುದು ಒಳ್ಳೆಯ ಬೆಳೆವಣಿಗೆ ಅಲ್ಲ. ಒಕ್ಕೂಟ ವ್ಯವಸ್ಥೆಗೆ ಮಾರಕ ಆಗುವ ಅಂಶಗಳಿರುವ ಬಜೆಟ್ ಇದಾಗಿದೆ ಎಂದು ಶರವಣ ವಿಶ್ಲೇಷಣೆ ಮಾಡಿದ್ದಾರೆ.
ಇಷ್ಟೆಲ್ಲಾ ಯೋಜನೆಗಳಿಗೆ ಹಣದ ಮೂಲದ ಬಗ್ಗೆ ಬಜೆಟ್ನಲ್ಲಿ ಉಲ್ಲೇಖವೇ ಇಲ್ಲವಾಗಿದೆ. ಮದ್ಯ, ಮುದ್ರಾಂಕ ನೋಂದಣಿ ಇನ್ನಿಷ್ಟು ದುಬಾರಿ ಆಗುವ ಸುಳಿವು ಸಿಕ್ಕಿದೆ ಎಂದು ಶರವಣ ಹೇಳಿದ್ದಾರೆ