ನಗರದಲ್ಲಿ ಮೀಟರ್ ಬಡ್ಡಿ ದಂಧೆ ಬೆಳಕಿಗೆ ಬಂದಿದ್ದು, ಸೈಕಲ್ ರವಿ ಸಹಚರರನ್ನು ಬಂಧಿಸಲಾಗಿದೆ.
ಉಮೇಶ್, ಸುರೇಶ್, ಮಂಜುನಾಥ್ ಬಂಧಿತ ಆರೋಪಿಗಳಾಗಿದ್ದು, ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಗೆ ಆರೋಪಿ ಮಂಜುನಾಥ್ ಸಾಲ ನೀಡಿದ್ದ. ಈ ಸಾಲದ ವಸೂಲಿ ಮಾಡಿಕೊಡಲು ಸೈಕಲ್ ರವಿ ಸಹಚರನಾದ ಉಮೇಶ್ಗೆ ಮಂಜುನಾಥ್ ಹೇಳಿದ್ದ. ಉಮೇಶ್ ತನ್ನ ಸಹಚರನಾದ ಸುರೇಶ್ ಜೊತೆ ಮೀಟರ್ ಬಡ್ಡಿ ವಸೂಲಿಗೆ ಮುಂದಾಗಿದ್ದ. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಉಮೇಶ್, ಸುರೇಶ್ ಹಾಗೂ ಮಂಜುನಾಥ್ ಅವರನ್ನು ಬಂಧಿಸಿದ್ದಾರೆ.
ಟ್ರಾವೆಲ್ಸ್ ವ್ಯವಹಾರಕ್ಕಾಗಿ ರಂಗನಾಥ್ ಎಂಬವರು ಮಂಜುನಾಥ್ ಬಳಿ 23 ಲಕ್ಷ ಹಣವನ್ನ ಬಡ್ಡಿಗೆ ಸಾಲ ಪಡೆದಿದ್ದರು. 23 ಲಕ್ಷ ಹಣವನ್ನ ಬಡ್ಡಿ ಸಮೇತ ರಂಗನಾಥ್ ಹಿಂದಿರುಗಿಸಿದ್ದರು. ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನ ಕೊಟ್ಟಿರುವುದು. ಇನ್ನೂ 5 ಲಕ್ಷ ಹಣವನ್ನ ನೀನು ಕೊಡಬೇಕು ಎಂದು ಪಟ್ಟು ಹಿಡಿದಿದ್ದ.
ಐದು ಲಕ್ಷ ಹಣವನ್ನ ರಂಗನಾಥ್ ಕೊಡಲು ನಿರಾಕರಿಸಿದಾಗ ರೌಡಿಶೀಟರ್ ಉಮೇಶ್ಗೆ ಹೇಳಿದ್ದ. ಉಮೇಶ್ ಹಾಗೂ ಸುರೇಶ್ ರಂಗನಾಥ್ಗೆ ಹಣ ಕೊಡುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಹೊಸಕೆರೆಹಳ್ಳಿ ಉಮೇಶ್ ರಂಗನಾಥನಿಗೆ ಅವಾಜ್ ಹಾಕಿರುವ ಆಡಿಯೋ ವೈರಲ್ ಆಗಿದೆ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಆರೋಪಿಗಳ ವಿರುದ್ಧ ಆರ್ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.