ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದ್ದು, ಏಪ್ರಿಲ್ 15 ರಿಂದ ಏಪ್ರಿಲ್ 23ರವರೆಗೆ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ.
ನಿನ್ನೆ (ಫೆ.18) ನಡೆದ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎ.ಜ್ಞಾನೇಂದ್ರ ಸ್ವಾಮಿ ಅವರನ್ನು ಕರಗ ಹೊರಲು ಆಯ್ಕೆ ಮಾಡಿದೆ. ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕರಗದ ಪೂಜಾರಿ ಎ. ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ರು, ಆದರೂ ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರು ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿ ಉತ್ಸವ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯ ತಲುಪಿಸಿದ್ದರು.
ಕರಗ ಎಂಬ ಹೆಸರು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪ. ಕರಗವನ್ನು ಮುಟ್ಟದೆ ಅಂದರೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ ಅದರಲ್ಲಿರುವ ಕಲಶವನ್ನು ಕೈಯಲ್ಲಿ ಮುಟ್ಟದೆ ಆ ಕಲಶವನ್ನು ಹೊರುವ ವ್ಯಕ್ತಿಯ ತಲೆ ಮೇಲೆ ಇಡಲಾಗುತ್ತದೆ. ಕರಗವನ್ನು ಹೊರುವವರು ಮಹಿಳೆಯಂತೆ ಅಲಂಕಾರ ಮಾಡಿಕೊಳ್ಳಬೇಕು. ಕಂಕಣ, ಮಂಗಳ-ಸೂತ್ರ, ಹಣೆಯ ಮೇಲೆ ಸಿಂಧೂರ ಇಟ್ಟುಕೊಂಡು ಮುತೈದೆಯಂತೆ ಕಾಣಬೇಕು. ಈ ರೀತಿ ಅಲಂಕಾರ ಮಾಡಿಕೊಂಡೇ ಕರಗವನ್ನು ಹೊರಬೇಕು. ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲೂ ಕರಗ ಉತ್ಸವದ ಉಲ್ಲೇಖವನ್ನು ಗಮನಿಸಬಹುದು.