ಕಳೆದ ಎರಡು ದಿನಗಳ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆ ಬಳಿಕ ರಷ್ಯಾದಲ್ಲಿ ಭಾರೀ ಕೋಲಾಹಲ ಉಂಟಾಗಿದ್ದು, ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದ ಸುಮಾರು 400 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ರಷ್ಯಾದ ವಿವಿಧ ನಗರಗಳಲ್ಲಿ ನವಲ್ನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಬೀದಿಗಿಳಿದರು. ಜೊತೆಗೆ ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿಯವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದರು.
ರಸ್ತೆಯಲ್ಲಿ ಹೆಚ್ಚುತ್ತಿರುವ ಪ್ರತಿಭಟನಾಕಾರರ ಗುಂಪನ್ನು ಕಂಡು ರಷ್ಯಾದ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸುವ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 12 ಕ್ಕೂ ಹೆಚ್ಚು ನಗರಗಳಲ್ಲಿ ಪೊಲೀಸರು ಶನಿವಾರ ರಾತ್ರಿಯವರೆಗೆ 401 ಜನರನ್ನು ಬಂಧಿಸಿದ್ದಾರೆ. ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.