ಬೆಂಗಳೂರು:– ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಫ್ರೀಡಂಪಾರ್ಕ್ ಅನ್ನು ನವೀಕರಿಸಿ ಪ್ರೇಕ್ಷಣೀಯ ಸ್ಥಳ ಹಾಗೂ ಹೆರಿಟೇಜ್ ಹಬ್ ಮಾಡೋದರ ಜೊತೆಗೆ ಇದರಿಂದಲೂ ಬಿಬಿಎಂಪಿ ಆದಾಯ ಬರುವಂತೆ ಮಾಡಿಕೊಳ್ಳಲು ಹೊರಟಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಅಂದರೆ ನೆನಪಾಗೋದು ಪ್ರತಿಭಟನೆ ಹಾಗೂ ಸರ್ಕಾರಿ ಕಾರ್ಯಕ್ರಮಗಳು. 21 ಎಕರೆಯಲ್ಲಿ ನಗರದ ಹೃದಯಭಾಗದಲ್ಲಿ ಇರುವ ಫ್ರೀಡಂ ಪಾರ್ಕ್ ಅನ್ನು ನವೀಕರಣಗೊಳಿಸಲು ಬಿಬಿಎಂಪಿ 5 ಕೋಟಿ ರೂಪಾಯಿ ಮೀಸಲಿಟ್ಟಿದ್ದು ನವೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಪಾರ್ಕ್ ನ ಅಸ್ತಿತ್ವದಲ್ಲಿರುವ ಹಳೆಯ ಸೆಂಟ್ರಲ್ ಜೈಲ್ ರಚನೆಗಳು, ವಿದ್ಯುತೀಕರಣ ಸೇರಿದಂತೆ ಕಟ್ಟಡಗಳಿಗೆ ಹಾನಿಯಾದ ವಿವಿಧ ಕಾಮಗಾರಿಯೊಂದಿಗೆ ರಾಮಚಂದ್ರ ರಸ್ತೆಯಿಂದ ಫ್ರೀಡಂ ಪಾರ್ಕ್ಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣಕ್ಕೆ ಯೋಜನೆ ನಡೆದಿದೆ. ಸಧ್ಯ ಫ್ರೀಡಂ ಪಾರ್ಕ್ ಒಳಗಡೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಪಾರ್ಕ್ ನವೀಕರಣ ಮೂಲಕ ವಾಣಿಜ್ಯ ದೃಷ್ಟಿಕೋನಕ್ಕೂ ಪಾಲಿಕೆ ಪ್ಲ್ಯಾನ್ ಮಾಡಿಕೊಂಡಿದೆ.
ಇನ್ನೂ ಕೋವಿಡ್ಗೂ ಮುಂಚಿತವಾಗಿಯಷ್ಟೇ ಬಿಬಿಎಂಪಿ 2 ಕೋಟಿಯಲ್ಲಿ ಇದೇ ಫ್ರೀಡಂ ಪಾರ್ಕ್ ಅನ್ನು ನವೀಕರಿಸಿತ್ತು. ಈ ವೇಳೆ ಖಾಲಿ ಬಿದ್ದಿದ್ದ ಜಾಗದಲ್ಲಿ ಆಂಫಿ ಥಿಯೇಟರ್, ಹೊರ ಸಭಾಂಗಣ ಹಾಗೂ ಗಾರ್ಡನ್ ಅನ್ನು ಇಲ್ಲಿ ಹೊಸದಾಗಿ ನಿರ್ಮಿಸಲಾಗಿತ್ತು. ಕಳಪೆ ನಿರ್ವಹಣೆಯಿಂದ ಇವೆಲ್ಲವೂ ಹಾಳು ಬೀಳಲು ಶುರುವಾಗಿದೆ. ಇದರೆ ಜೊತೆಗೆ ಇದರೊಳಗಿರುವ ಹಳೆಯ ಕೇಂದ್ರ ಕಾರಾಗೃಹ ಕೂಡ ಕುಸಿಯುವ ಹಂತಕ್ಕೆ ಬಂದು ನಿಂತಿದೆ. ಹೀಗಾಗಿ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಂಡು ಹೊಸ ಲುಕ್ ಜೊತೆಗೆ ಆದಾಯವನ್ನೂ ಇಲ್ಲಿಂದ ಪಾಲಿಕೆ ಎದುರು ನೋಡುತ್ತಿದೆ.
ಒಟ್ಟಿನಲ್ಲಿ ಪಾರ್ಕ್ ನ ಹೊರಭಾಗದಲ್ಲಿರುವ ಖಾಲಿ ಜಾಗ ಪ್ರತಿಭಟನೆಗೆ ಹಾಗೂ ಒಳಭಾಗ ಸರ್ಕಾರಿ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ಎಲ್ಲದಕ್ಕೂ ಸುಸಜ್ಜಿತವಾಗಿ ಅವಕಾಶ ಕಲ್ಪಿಸಿಕೊಡಲು ಪಾಲಿಕೆ ಮುಂದಾಗಿದ್ದು, ಖಾಸಗಿ ಕಾರ್ಯಕ್ರಮಗಳಿಗೂ ನಿಗದಿತ ದರದೊಂದು ಅವಕಾಶ ನೀಡುವ ಮೂಲಕ ಹೀಗೆ ಯಾವುದೇ ಕೆಲಸಕ್ಕೆ ಬಾರದೆ ಬಿದ್ದಿರುವ ಜಾಗದಿಂದ ಆದಾಯ ಕ್ರೂಢೀಕರಿಸಲು ಪಾಲಿಕೆ ಚಿಂತಿಸಿದೆ.