ಮಾರುಕಟ್ಟೆಗೆ ಹೋದಾಗ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ, ಒಂದು ವಾರದ ವಸ್ತುಗಳನ್ನು ತರುತ್ತೀರಿ. ತಾಪಮಾನವು ಕಡಿಮೆಯಾದಾಗ, ಇದು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಬೇಸಿಗೆಯಲ್ಲಿ, ತರಕಾರಿಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಅವು ಯಾವುದೇ ಸಮಯದಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ.
ಸೊಪ್ಪುಗಳನ್ನು ತಂದಾಗ, ಅವುಗಳ ಬೇರಿಗೆ ಮಣ್ಣು ಅಂಟಿದ್ದರೆ, ಅದನ್ನು ತೊಳೆದು ಶುಚಿ ಮಾಡಿ. ನಂತರ ಆ ಸೊಪ್ಪಿನ ಕಂತೆ ಬಿಚ್ಚಿ ಅದನ್ನು ಯಥಾವತ್ ಒಂದು ಪಾತ್ರೆ ನೀರಿನಲ್ಲಿ, ಬೇರು ಮುಳುಗುವಂತೆ ಇಡಿ. ಎಲೆಗಳಿಗೆ ನೀರು ತಾಗುವುದು ಬೇಡ. ಹೀಗಿಟ್ಟರೆ ಒಂದೆರಡು ದಿನಗಳವರೆಗೂ ಸೊಪ್ಪುಗಳು ಅಗ್ದಿ ತಾಜಾ ಆಗಿರಬಲ್ಲವು. ಬೇರು ಇಲ್ಲದಿದ್ದರೆ, ಅವುಗಳನ್ನು ಸೋಸಿ, ನೀರಿದ್ದರೆ ಆರಿಸಿ, ಫ್ರಿಜ್ನಲ್ಲಿ ಇಡಬಹುದು. ಆದರೆ ಈರುಳ್ಳಿ, ಆಲೂಗಡ್ಡೆ, ಗೆಣಸು, ಬೆಳ್ಳುಳ್ಳಿ, ಟೊಮೇಟೊಗಳನ್ನು ಫ್ರಿಜ್ನಲ್ಲಿ ಇರಿಸದೆ, ತಂಪಾದ ಸ್ಥಳದಲ್ಲಿ ಶೇಖರಿಸುವುದೇ ಸರಿ.
ಮಾವು, ಬಾಳೆ, ಅವಕಾಡೊ, ಕಿವಿ, ಪೇರ್, ಪ್ಲಮ್ ಮುಂತಾದ ಹಣ್ಣುಗಳು ಕಳಿತಾಗ ಇಥಲೀನ್ ಅನಿಲ ಬಿಡುಗಡೆಯಾಗುತ್ತದೆ. ಇದರಿಂದ ಈ ಹಣ್ಣುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸೇಬುಹಣ್ಣು, ಕಲ್ಲಂಗಡಿ, ಗಜ್ಜರಿ, ಬ್ರೊಕೊಲಿಯಂಥ ಹಸಿರು ತರಕಾರಿ ಮುಂತಾದವುಗಳು ಇಥಲೀನ್ನಿಂದಾಗಿ ಅವಧಿಗೆ ಮೊದಲೇ ಆಯಸ್ಸು ಕಳೆದುಕೊಳ್ಳುತ್ತವೆ. ಹಾಗಾಗಿ ಈ ಎರಡು ಜಾತಿಯ ಹಣ್ಣ-ತರಕಾರಿಗಳನ್ನು ಪ್ರತ್ಯೇಕವಾಗಿಯೇ ಶೇಖರಿಸಿಡಿ.
ಕೆಲವನ್ನು ಮೊದಲೇ ತೊಳೆಯಬೇಡಿ
ಕೆಲವರಿಗೆ ತಂದ ಹಣ್ಣು-ತರಕಾರಿಗಳನ್ನೆಲ್ಲಾ ತೊಳೆದು ಶುಚಿ ಮಾಡಿ ಶೇಖರಿಸುವ ಅಭ್ಯಾಸವಿರುತ್ತದೆ. ಆದರೆ ಬೆರ್ರಿಗಳು, ದ್ರಾಕ್ಷಿಯಂಥವನ್ನು ತಿನ್ನುವ ಮೊದಲಷ್ಟೇ ತೊಳೆದರೆ ಸಾಕು. ಮೊದಲೇ ಅವುಗಳನ್ನು ನೀರಿಗೆ ಹಾಕಿದರೆ, ಎಷ್ಟು ಪ್ರಯತ್ನಿಸಿದರೂ, ಅವುಗಳಲ್ಲಿನ ನೀರು ಆರಿಸುವುದು ಸಾಧ್ಯವಿಲ್ಲ. ಹಾಗಾಗಿ ಈ ಫಲಗಳು ಶೀಘ್ರವೇ ಕೊಳೆಯಲಾರಂಭಿಸುತ್ತವೆ. ಶುಂಠಿಯನ್ನು ಸಹ ಮಣ್ಣಿನೊಂದಿಗೇ ತಂಪಾದ ಜಾಗದಲ್ಲಿರಿಸಿ, ಬೇಕಾದಾಗ ತೊಳೆದು ಉಪಯೋಗಿಸಿದರೆ ಅದರ ಆಯಸ್ಸು ಹೆಚ್ಚು.
ಬೇರ್ಪಡಿಸಿ ಶೇಖರಿಸಿಡಿ
ಕ್ಯಾರೆಟ್, ಮೂಲಂಗಿ, ಬೀಟ್ನಂಥ ಗಡ್ಡೆಗಳನ್ನು ತಂದಾಗ, ಅವುಗಳ ಮೇಲೆ ಸೊಪ್ಪುಗಳಿರಬಹುದು. ಈ ಸೊಪ್ಪನ್ನು ಬೇರ್ಪಡಿಸಿಯೇ ಶೇಖರಿಸಿಡಿ. ಪ್ಲಾಸ್ಟಿಕ್ ಚೀಲಗಳಲ್ಲಿ ಫ್ರಿಜ್ನಲ್ಲಿಟ್ಟರೆ ಇವುಗಳನ್ನು ವಾರಗಟ್ಟಲೆ ಕೆಡದಂತೆ ಕಾಪಾಡಿಕೊಳ್ಳಬಹುದು. ಹೂಕೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಡಬ್ಬಿಗಳಲ್ಲಿ ಬಿಗಿಯಾಗಿ ಮುಚ್ಚಿಡಿ. ಕತ್ತರಿಸದೇ ಇರುವುದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಬಹುದು. ಒಮ್ಮೆ ಕತ್ತರಿಸಿಯಾದ ಮೇಲೆ ಡಬ್ಬಿಗಳಲ್ಲಿ ಸೀಲ್ ಮಾಡಿ ಶೇಖರಿಸಿ. ಹಾಗಿಲ್ಲದಿದ್ದರೆ ಅವುಗಳು ಬೇಗನೇ ಕಪ್ಪಾಗುತ್ತವೆ.