ದರ್ಶನ್ ನಟನೆಯ ‘ಕಾಟೇರ’ ಸಿನಿಮಾ50 ದಿನಗಳನ್ನು ಪೂರೈಸಿದೆ. ಈ ಸಕ್ಸಸ್ ಸಂದರ್ಭದಲ್ಲಿ ನಟ ದರ್ಶನ್ ನೀಡಿರುವ ಹೇಳಿಕೆ ಇದೀಗ ಸಖತ್ ಸದ್ದು ಮಾಡ್ತಿದೆ. ಅಯ್ಯೋ ತಗಡೇ ಎಂದು ದರ್ಶನ್ ನಿರ್ಮಾಪಕ ಉಮಾಪತಿಗೆ ಟಾಂಗ್ ನೀಡಿದ್ದು ಇದಕ್ಕೆ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಮಾತಿಗೆ ಪ್ರತಿಕ್ರಿಯಿಸಿದ ನಿರ್ಮಾಪಕ ಉಮಾಪತಿ, ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ ಎಂದಿದ್ದಾರೆ. ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ನೀಡಿರುವ ಹೇಳಿಕೆಯಿಂದ ಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ. ದರ್ಶನ್ ಟಾಂಗ್ಗೆ ನಿರ್ಮಾಪಕ ಉಮಾಪತಿ ಉತ್ತರ ನೀಡಿದ್ದಾರೆ. ನಮ್ಮ ಜಗಳವನ್ನು ಕುಟುಂಬವು ಕೂಡ ನೋಡುತ್ತದೆ. ಫ್ಯಾಮಿಲಿಗೆ ಯಾವ ರೀತಿ ಎಫೆಕ್ಟ್ ಆಗುತ್ತೆ ಎಂಬುದರ ಬಗ್ಗೆ ಉಮಾಪತಿ ಮಾತನಾಡಿದ್ದಾರೆ.
ನಾನು ತಗಡು ವ್ಯಕ್ತಿ ಇರಬಹುದು ಆದರೆ ಅವರ ಲೈಫ್ಗೆ ನಾನು ವಾಚ್ಮ್ಯಾನ್ ಅಲ್ಲ. ಪದಗಳನ್ನು ಬಳಸುವಾಗ ಗಮನ ಇರಬೇಕು. ಸಾಯುವವರೆಗೂ ಯಾರು ನೋಡದೇ ಇರುವ ಸಕ್ಸಸ್ ಏನಲ್ಲ ಇದು. ಎಲ್ಲರೂ ನಾಳೆ ಮಣ್ಣಿಗೆ ಹೋಗಬೇಕು. ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ. ಸಿನಿಮಾ ಅಂತ ಬಂದಾಗ ನನ್ನ ಸಕ್ಸಸ್ನಲ್ಲಿ ದರ್ಶನ್, ಶ್ರೀಮುರಳಿ, ಚಿಕ್ಕಣ್ಣ, ಡೈರೆಕ್ಟರ್ ಕೃಷ್ಣ, ತರುಣ್ ಪಾಲಿದೆ. ಒಬ್ಬ ವ್ಯಕ್ತಿಯಿಂದ ಉಮಾಪತಿ ಬೆಳೆದಿಲ್ಲ. ನಾನು ಕಷ್ಟಪಟ್ಟು ಬೆಳೆದಿದ್ದೀನಿ. ಯಾಕೆಂದ್ರೆ ನಾನು ನಮ್ಮನೆ ದುಡ್ಡನ್ನು ಸಿನಿಮಾಗೆ ಹಾಕಿರೋದು. ಕಂಡವರ ದುಡ್ಡು ಹಾಕಿಲ್ಲ. ಗೌರವ ಅನ್ನೋದು ಪರಸ್ಪರ ಎರಡು ಕಡೆ ಇರಬೇಕು ಎಂದು ಉಮಾಪತಿ ಹೇಳಿದ್ದಾರೆ.
ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಹೇಳಿಕೊಂಡು ಹೋಗಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಹೇಳಿದ್ದಾರೆ. ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಪ್ರತಿಕ್ರಿಯಿಸಿದ್ದಾರೆ.
‘ಕಾಟೇರ’ ಐಡಿಯಾ ಕೊಟ್ಟಿದ್ದು ದರ್ಶನ್ ಆದರೆ ಅದು ನನ್ನ ಬ್ಯಾನರ್ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು ಉಮಾಪತಿ ಹೇಳಿದ್ದಾರೆ.