ಬೆಂಗಳೂರು:– ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ
.ವಿದ್ಯಾರ್ಥಿಗಳು ಫೇಲ್ ಆದರೂ, ಪಾಸ್ ಆಗಿದ್ದರೂ ಅಂತಿಮ ಪರೀಕ್ಷೆ ಮಾದರಿಯಲ್ಲಿ 3 ಬಾರಿ ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ದ್ವಿತೀಯ ಪಿಯುಸಿಯ ಮೊದಲ ಪೂರಕ ಪರೀಕ್ಷೆ ಮಾರ್ಚ್ 1ರಿಂದ 22ವರೆಗೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 25 ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ಪರೀಕ್ಷೆ ಮಾದರಿಯಲ್ಲಿ 3 ಬಾರಿ ಪರೀಕ್ಷೆ ನಡೆಸಲಾಗುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 6,98,624 ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗೆ 8,96,171 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪರೀಕ್ಷೆ-1ರ ಸಂಬಂಧ ಜಿಲ್ಲಾ ಹಂತದ ಅಧಿಕಾರಿಗಳ ಸಭೆಗಳನ್ನು ನಡೆಸಲಾಗಿದೆ. ಎಲ್ಲಾ ರೀತಿ ತಯಾರಿ ಮಾಡಿಕೊಳ್ಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ಏಪ್ರಿಲ್ ಕೊನೆಯ ವಾರದಲ್ಲಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆ-2 ಮೇ ಮೂರನೇ ವಾರದಲ್ಲಿ ನಡೆಸಲಾಗುತ್ತದೆ. ಅನುತ್ತೀರ್ಣಗೊಂಡವರಿಗೆ 3 ಬಾರಿ ಪೂರಕ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣಗೊಂಡವರು ಕೂಡಾ ಹೆಚ್ಚು ಅಂಕ ಗಳಿಸಲು ಮತ್ತೆ ಪರೀಕ್ಷೆ ಬರೆಯಬಹುದು. ಪರೀಕ್ಷೆ ಬರೆದ ಮೂರು ಬಾರಿಯಲ್ಲಿ ಹೆಚ್ಚು ಅಂಕ ಗಳಿಸಿರುವುದನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.