ಬೆಂಗಳೂರು:- ರಾಜ್ಯದಾದ್ಯಂತ ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ವರ್ಕ್ ಫ್ರಂ ಹೋಂ ಕೆಲಸದ ಹೆಸರಿನಲ್ಲಿ ಐಟಿ ಉದ್ಯೋಗಿಯೊಬ್ಬರಿಗೆ 4.33 ಲಕ್ಷ ರೂಪಾಯಿ ಪಂಗನಾಮ ಹಾಕಿದ ಕೃತ್ಯ ಬೆಳಕಿಗೆ ಬಂದಿದೆ.
ಬಳ್ಳಾರಿಯ ರವಿ ಎಂಬ ಯುವಕ ವಂಚನೆಗೆ ಒಳಗಾದವರು. ಮನೆಯಲ್ಲೇ ಕುಳಿತು ಹೊಟೇಲ್ ಬ್ಯುಸಿನೆಸ್ ಮಾಡಿ ಹಣ ಸಂಪಾದಿಸಿ ಎಂಬ ವಾಟ್ಸ್ಅ್ಯಪ್ ಸಂದೇಶ ರವಿಗೆ ಬಂದಿತ್ತು. ಇದನ್ನು ನಂಬಿದ ಅವರು ಮರುಳಾಗಿದ್ದಾರೆ. ಒಂದೇ ದಿನದಲ್ಲಿ 4,33,000 ರೂ. ಹಣ ಕಳೆದುಕೊಂಡಿದ್ದಾರೆ.
ರೇಟಿಂಗ್ ಅ್ಯಂಡ್ ರಿವ್ಯೂ ಕೊಟ್ರೆ ನಿತ್ಯ 6000 ರೂ. ಲಾಭದ ಭರವಸೆ ನೀಡಲಾಗಿತ್ತು. ಟಿಲಿಗ್ರಾಂನಲ್ಲಿ ಬಿಸಿನೆಸ್ ಟಾಸ್ಕ್ ನೀಡುತ್ತಿದ್ದ ಹೊಟೇಲ್ ಕಂಪನಿ, ಟಾಸ್ಕ್ ಕೊಟ್ಟು ಹಂತ ಹಂತವಾಗಿ ಲಕ್ಷ ಲಕ್ಷ ರೂಪಾಯಿ ಹಣ ಪಡೆದಿದೆ. ರೋಹಿಣಿ ಸಿಯಾ ಎಂಬ ವ್ಯಕ್ತಿಯಿಂದ ಮೋಸವಾಗಿದೆ ಎಂದು ರವಿ ದೂರಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡಿ ಲಕ್ಷ ಲಕ್ಷ ಹಣ ಗಳಿಸಲು ಆಮಿಷ್ ತೋರಿಸಿ ವಂಚನೆ ಎಸಗಲಾಗಿದೆ.
ರವಿ ಅವರ ಮೂರು ಬ್ಯಾಂಕ್ ಖಾತೆಗಳಿಂದ ಯುಪಿಐ ಆ್ಯಪ್ ಮೂಲಕ 4.33 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಲಾಭಾಂಶ ಪಡೆಯಬೇಕಿದ್ದರೆ ಮತ್ತೆ 1.80 ಲಕ್ಷ ರೂ. ಟ್ಯಾಕ್ಸ್ ಭರಿಸಬೇಕು ಎಂದು ರವಿಗೆ ಸೂಚನೆ ನೀಡಲಾಗಿತ್ತು. ಅಷ್ಟರಲ್ಲೇ, ಉದ್ಯೋಗ ಸಿಗದೆ ಕಂಗಾಲಾಗಿದ್ದ ರವಿ ಬಳ್ಳಾರಿ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲಿ ದೂರು ದಾಖಲಿಸಿದ್ದಾರೆ.