ಬೆಳಗಾವಿ: ಗಡಿ ವಿವಾದ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಗಡಿವಿವಾದ ಸಂಬಂಧ ಇಂದು ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರ ಸಭೆ ಕರೆದಿದೆ. ಮುಂಬೈನಲ್ಲಿರುವ ಮಹಾರಾಷ್ಟ್ರ ಮಂತ್ರಾಲಯ (ವಿಧಾನಸೌಧ)ದ ಕಚೇರಿಯಲ್ಲಿ ಮಧ್ಯಾಹ್ನ ಸಭೆ ನಿಗದಿಯಾಗಿದೆ. ಸಭೆಗೆ ಬೆಳಗಾವಿಯ ನಾಡದ್ರೋಹಿ ಎಂಇಎಸ್ ಪುಂಡರಿಗೆ ಆಹ್ವಾನ ನೀಡಲಾಗಿದ್ದು,
ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಸಭೆಯಲ್ಲಿ ಗಡಿವಿವಾದ ಸಂಬಂಧ ಸಂಗ್ರಹಿಸಬೇಕಾದ ಸಾಕ್ಷ್ಯಾಧಾರ ದಾಖಲೆ ಸಂಬಂಧ ಚರ್ಚೆ ನಡೆಯಲಿದ್ದು, ಸುಪ್ರೀಂಕೋರ್ಟ್ ನಲ್ಲಿ ಗಡಿವಿವಾದ ಸಂಬಂಧ ನೇಮಿಸಿರುವ ವಕೀಲರ ತಂಡದ ಜೊತೆಯೂ ಚರ್ಚೆಗೆ ಮಹಾರಾಷ್ಟ್ರ ಮುಂದಾಗಿದೆ.
ಯಾವುದೇ ಸಮಯದಲ್ಲಿ ಸುಪ್ರೀಂಕೋರ್ಟ್ ನಲ್ಲಿ (Supreme Court) ಗಡಿವಿವಾದ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಗಡಿವಿವಾದ ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಸಭೆ ಮೇಲೆ ಸಭೆ ನಡೆಸುತ್ತಿದೆ. ಏನೂ ಗೊತ್ತಿಲ್ಲದಂತೆ ಇರುವ ಕರ್ನಾಟಕ ಸರ್ಕಾರದ ಮೌನ ನಡೆಗೆ ಗಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.