ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಸದ್ಯ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೋವಾದ ಪ್ರತಿಷ್ಟಿತ ಐಟಿಸಿ ಗ್ರ್ಯಾಂಡ್ನಲ್ಲಿ ರಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.
ರಕುಲ್ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದಾರೆ.
ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಾಕುಲ್ ದಂಪತಿ ಮಿಂಚಿದ್ದು ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರಕುಲ್, ಜಾಕಿ ಗೋವಾದಲ್ಲಿ ಬೆಳಗ್ಗೆ ಸಿಖ್ ಸಂಪ್ರದಾಯದಂತೆ, ಸಂಜೆ ಸಿಂಧಿ ಸಂಪ್ರದಾಯದಂತೆ ವಿವಾಹವಾದರು.
ರಕುಲ್, ಜಾಕಿ ವಿವಾಹಕ್ಕೆ ಬಾಲಿವುಡ್ ನ ನಟ, ನಟಿಯರು ಹಾಜರಾಗಿದ್ದರು. ವರುಣ್ ಧವನ್, ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್, ಇಶಾ ಡಿಯೋಲ್, ಡೇವಿಡ್ ಧವನ್, ಆಯುಷ್ಮಾನ್ ಖುರಾನಾ ಸೇರಿದಂತೆ ಸ್ಟಾರ್ ನಟ-ನಟಿಯರು ವಿವಾಹದಲ್ಲಿ ಭಾಗಿಯಾಗಿದ್ದರು.
ನಟಿ ರಕುಲ್ ಪ್ರೀತ್ ಸಿಂಗ್, ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ರಕುಲ್ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಇಬ್ಬರು ಅಕ್ಕಪಕ್ಕದ ಮನೆಯವರು. ಇಬ್ಬರ ನಡುವೆ ಮೊದಲಿನಿಂದಲೂ ಸ್ನೇಹವಿತ್ತು. ಕೋವಿಡ್ ಲಾಕ್ಡೌನ್ ಸಮಯದಲ್ಲಿ ಇಬ್ಬರ ಮಧ್ಯೆ ಪ್ರೇಮವಾಗಿತ್ತು. 2021ರಲ್ಲಿ ಜಾಕಿ ಭಗ್ನಾನಿ, ರಕುಲ್ ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸುವ ಮೂಲಕ ತಮ್ಮ ಪ್ರೀತಿ ಸಂದೇಶ ತಿಳಿಸಿದ್ದರು. ಅಂದೇ ಇವರಿಬ್ಬರ ಸಂಬಂಧ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತಗೊಳಿಸಲಾಗಿತ್ತು.
ಸಂಬಂಧಗಳು ಸರಿಯಾದ ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗಬೇಕು. ಯಶಸ್ಸಿಗೆ ಯಾವುದೇ ಮಂತ್ರ ಬೇಕಾಗಿಲ್ಲ, ಯಾವುದೇ ಸಂಬಂಧ ಅಂಗೀಕರಿಸುವಾಗ ಪರಿಪೂರ್ಣವಾಗಿರಬೇಕು. ಬೇರೊಬ್ಬರನ್ನು ಪೂರ್ಣಗೊಳಿಸುವ ಮುನ್ನ ನಾವು ಸಂಪೂರ್ಣರಾಗಿರಬೇಕು ಎಂದು ಸಂದರ್ಶನವೊಂದರಲ್ಲಿ ನಟಿ ರಕುಲ್ ಪ್ರೀತಿ ಸಿಂಗ್ ಹೇಳಿಕೊಂಡಿದ್ದರು.