ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ‘ಕಾಟೇರ’ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ವೇಳೆ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಗ್ಗೆ ಆಡಿದ ಮಾತುಗಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ದರ್ಶನ್ ಅವರು ‘ತಗಡು’ ಎಂಬ ಪದ ಬಳಕೆ ಮಾಡಿದ್ದಕ್ಕೆ ಆಕ್ಷೇಪ ಎದುರಾಗಿದ್ದು ಉಮಾಪತಿ ಶ್ರೀನಿವಾಸ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು ರಾಜ್ಯ ಒಕ್ಕಲಿಗರ ಸಂಘ ಮುಂದಾಗಿದೆ.
ಇಂದು ಬೆಳಿಗ್ಗೆ 11.30ಕ್ಕೆ ರಾಜ್ಯ ಒಕ್ಕಲಿಗರ ಸಂಘದ ಕೆಂಪೇಗೌಡ ಭವನದ 2ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದ್ದು, ದರ್ಶನ್ ಅವರ ಹೇಳಿಕೆ ಬಗ್ಗೆ ಒಕ್ಕಲಿಗರ ಸಂಘದ ಪ್ರಮುಖರು ಮಾತನಾಡಲಿದ್ದಾರೆ.
‘ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಿನಿಮಾ ನಿರ್ಮಾಪಕರೂ ಆಗಿರುವ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಖ್ಯಾತ ನಟರಾದ ದರ್ಶನ್ ಅವರು ಮಾತನಾಡಿದ ರೀತಿ ಸರಿಯಿಲ್ಲ. ಸುಮಾರು ಚಿತ್ರಗಳಿಗೆ ಬಂಡವಾಳ ಹೂಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಉಮಾಪತಿ ಅವರಿಗೆ ತಗಡು ಎಂದು ಅವಹೇಳನಕಾರಿ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿದ್ದು ಸರಿಯಲ್ಲ’ ಎಂದು ಒಕ್ಕಲಿಗರ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.
ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ಅವರು ಜೊತೆಯಾಗಿ ‘ರಾಬರ್ಟ್’ ಸಿನಿಮಾ ಮಾಡಿದ್ದರು. ಆ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು. ಅದು ಈಗ ತಾರಕಕ್ಕೆ ಏರಿದೆ. ‘ಕಾಟೇರ’ ಸಿನಿಮಾದ ಟೈಟಲ್ ನೀಡಿದ್ದು ಮತ್ತು ಕಥೆ ಸಿದ್ಧ ಮಾಡಿಸಿದ್ದು ತಾವೇ ಎಂದು ಉಮಾಪತಿ ಹೇಳಿದ್ದನ್ನು ದರ್ಶನ್ ತಳ್ಳಿಹಾಕಿದರು. ಆ ಸಂದರ್ಭದಲ್ಲಿ ತಗಡು ಎಂಬ ಪದ ಬಳಕೆ ಮಾಡಿದರು. ಇದೀಗ ಇದೇ ಪದ ಚರ್ಚೆಗೆ ಗ್ರಾಸವಾಗಿದ್ದು ದರ್ಶನ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ.