ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಬಹಿರಂಗಪಡಿಸಿದ್ದಾರೆ.
ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಸುಮಲತಾ ಈ ವಿಚಾರವನ್ನು ತಿಳಿಸಿದ್ದರು. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿದ ನಟಿ ಈ ಮಧ್ಯೆ ತಮಗೆ ಪ್ರಾಣ ಬೆದರಿಕೆ ಇದ್ದ ಬಗ್ಗೆ ತಿಳಿಸಿದ್ದಾರೆ.
ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದರು.
ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ ನೀಡಿ ಬೀಳ್ಕೊಡಲಾಯಿತು.