ನೊರೊವೈರಸ್ ಎಂದು ಕರೆಯಲಾಗುವ ಹೊಟ್ಟೆಯ ಸೋಂಕು ಸದ್ಯ ಅಮೆರಿಕದ ಈಶಾನ್ಯ ಪ್ರದೇಶದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಏಜೆನ್ಸಿ ಸಿಡಿಸಿ ಅಂಕಿ ಅಂಶದಲ್ಲಿ ವರದಿ ಆಗಿದೆ.
ಸಿಡಿಸಿ ವರದಿಯ ಪ್ರಕಾರ, ಈಶಾನ್ಯ ಪ್ರದೇಶದಲ್ಲಿನ 3 ವಾರಗಳ ಪರೀಕ್ಷೆಯ ಸರಾಸರಿ ಪಾಸಿಟಿವ್ ಪ್ರಮಾಣ 13.9%ಕ್ಕೆ ತಲುಪಿದೆ ಮತ್ತು 2023ರ ಡಿಸೆಂಬರ್ ಮಧ್ಯಭಾಗದಿಂದ ಪಾಸಿಟಿವ್ ಪ್ರಮಾಣ 10%ಕ್ಕೂ ಹೆಚ್ಚಿನ ಪ್ರಮಾಣದಲ್ಲಿಯೇ ಉಳಿದಿದೆ.
ಅಮೆರಿಕದಲ್ಲಿ ವಾಂತಿ, ಅತಿಸಾರ ಮತ್ತು ಆಹಾರದಿಂದ ಹರಡುವ ಅನಾರೋಗ್ಯದ ಪ್ರಾಥಮಿಕ ಕಾರಣ ನೊರೊವೈರಸ್ ಎಂದು ಗುರುತಿಸಲಾಗಿದೆ. ಈ ಅನಾರೋಗ್ಯ ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಬಹಳ ಸುಲಭವಾಗಿ ಮತ್ತು ತ್ವರಿತವಾಗಿ ಹರಡುತ್ತದೆ. ನೊರೊವೈರಸ್ ಹರಡುವುದನ್ನು ತಡೆಯಲು ಸಾಬೂನು ಮತ್ತು ನೀರಿನಿಂದ ಕೈತೊಳೆಯಬೇಕು, ಬ್ಲೀಚಿಂಗ್ ಪೌಡರ್ ಬಳಸಬೇಕು ಮತ್ತು ಬಿಸಿನೀರಿನಿಂದ ಬಟ್ಟೆಗಳನ್ನು ಒಗೆಯಬೇಕು ಎಂದು ಸಿಡಿಸಿ ವರದಿಯಲ್ಲಿ ತಿಳಿಸಿದೆ.