ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ಪಿಟಿಐ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಮತದಾನದ ಹಾಗೂ ಮತಗಳ ಎಣಿಕೆಯ ಸಂದರ್ಭದಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಮತ ಎಣಿಕೆ ಪ್ರಕ್ರಿಯೆ ಅಕ್ರಮಗಳ ತಾಯಿಯಾಗಿದೆ. ಹಲವು ಕ್ಷೇತ್ರಗಳ ಫಲಿತಾಂಶವನ್ನು ತಿರುಚಲಾಗಿದೆ. ಸೋತ ಅಭ್ಯರ್ಥಿಗಳು ಗೆದ್ದಿದ್ದಾರೆಂದು ಘೋಷಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಆರೋಪಿಸಿದೆ. ಈ ಎಲ್ಲಾ ಅಕ್ರಮಗಳಿಂದ ಪಿಟಿಐ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಜನಾದೇಶವನ್ನು ಕದಿಯಲಾಗಿದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಲಾಗಿದೆ.
ರಾಷ್ಟ್ರೀಯ ಅಸೆಂಬ್ಲಿಗೆ ನಡೆದಿದ್ದ ಚುನಾವಣೆಯಲ್ಲಿ ಪಿಟಿಐ ಬೆಂಬಲದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳು 180 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಆದರೆ ಮತ ಎಣಿಕೆಯ ಅಕ್ರಮದಿಂದಾಗಿ ಪಕ್ಷಕ್ಕೆ ದಕ್ಕಿದ ಸ್ಥಾನಗಳನ್ನು 92ಕ್ಕೆ ಇಳಿಸಲಾಗಿದ್ದು ಅಧಿಕಾರಕ್ಕೆ ಮರಳುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಪಿಟಿಐ ಪ್ರತಿಪಾದಿಸಿದೆ. ಚುನಾವಣೆಯ ಅಕ್ರಮವನ್ನು ಪ್ರಶ್ನಿಸಿ ಪಿಟಿಐ ಹಿರಿಯ ಮುಖಂಡ ಶೇರ್ ಅಫ್ಝಲ್ ಮರ್ವಾಟ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಮತ್ತು ಚುನಾವಣಾ ಆಯೋಗದ ಇತರ ಸದಸ್ಯರ ನೇಮಕವನ್ನೂ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ ಎಂದು ತಿಳಿಸಿದ್ದಾರೆ.