ಬೆಂಗಳೂರು: ಮುಖ್ಯಮಂತ್ರಿಗಳಿಗೆ ಶೃಂಗಾರ ಸಿರಿ ಬರಗಾಲದ ಜನರಿಗೆ ಸಂಕಟದ ಕಹಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಜನ ಜಾನುವಾರುಗಳಿಗೆ ನೀರು, ಮೇವಿಗೆ ಆಹಾಕಾರ ಉಂಟಾಗಿ ನಾಡಿನೆಲ್ಲೆಡೆ ತೀವ್ರ ಬರ ಎದುರಿಸುತ್ತಿರುವ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ಬರೊಬ್ಬರಿ 9 ಕೋಟಿ ದುಂದು ವೆಚ್ಚ ಮಾಡುವ ಜರೂರು ಮುಖ್ಯಮಂತ್ರಿಗಳಿಗಿತ್ತೆ? ಎಂದು ಕಿಡಿಕಾರಿದ್ದಾರೆ.
ಹೀನಾಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ, ಸಂಕಷ್ಟದ ಕಾಲದ ಪರಿಹಾರ ಕಾರ್ಯವೂ ಸ್ಥಗಿತಗೊಂಡಿದೆ, ಇಂಥಾ ಪರಿಸ್ಥಿತಿಯಲ್ಲೂ ಮನೆ ಶೃಂಗಾರದ ಆದ್ಯತೆ ಪಡೆದು 9 ಕೋಟಿ ನುಂಗಿದರೆ “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು”..ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ ಎಂದು ಲೇವಾಡಿ ಮಾಡಿದ್ದಾರೆ.