ಬೆಂಗಳೂರು: ಇತ್ತ ಸಂಸದೆ ಸುಮಲತಾ ಸಭೆ ನಡೆಸಿದ್ರೆ, ಅತ್ತ ಬಿಡದಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡ ಮಂಡ್ಯ ಭಾಗದ ನಾಯಕರ ಸಭೆ ನಡೆಸಿದ್ದಾರೆ.
ನಗರದಲ್ಲಿ ಸುಮಲತಾ ಸಭೆ ವಿಚಾರವಾಗಿ ಮಾತನಾಡಿರುವ ಕುಮಾರಸ್ವಾಮಿ, ಅವರ ಸುದ್ದಿ ನನಗೆ ಬೇಡ. ನನ್ನ ಪಕ್ಷದ ಸಂಘಟನೆ ಮಾಡಬೇಕು, ಅದನ್ನು ಮಾಡುತ್ತಿದ್ದೇವೆ. ಬೇರೆಯವರ ಸುದ್ದಿ ಕಟ್ಟಿಕೊಂಡು ನನಗೇನು ಆಗಬೇಕು? ಎಂದು ಹೇಳಿದರು.
ಮಂಡ್ಯ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಮಾತನಾಡಿದ ಅವರು, ಚುನಾವಣೆಗೆ ತಯಾರಿ ಮಾಡಬೇಕು. ಅದಕ್ಕಾಗಿ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಮಂಡ್ಯ, ಇಂಡಿಯಾ ಯಾವುದು ಇಲ್ಲ ಬ್ರದರ್. ಪಕ್ಷದ ಸಂಘಟನೆಗಾಗಿ ಇಂದು ಸಭೆ ಕರೆದಿದ್ದೇನೆ. ಎಲ್ಲ ಕ್ಷೇತ್ರದ ರೀತಿ ಇವತ್ತು ಮಂಡ್ಯ ಜಿಲ್ಲೆ ಸಂಬಂಧ ಸಭೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದು ಕೂಡಾ ಸರಿ ಹೋಗಲಿದೆ ಬನ್ನಿ. ಬೆಂಗಳೂರು ಗ್ರಾಮಾಂತರ ಎಲ್ಲೂ ಹೋಗಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಇನ್ನೂ ಸುಮಲತಾ ಸಭೆ ನಡೆಸಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಮಾಡ್ತಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಆರೋಗ್ಯಕರವಾದ ಬೆಳವಣಿಗೆಗಳು ಆಗ್ತಿವೆ. ಹಾಗಾಗಿ, ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದರು.